ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಕೆರೆ ಭಾಗದ ಹೊಳೆಗೆ ಸೇತುವೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ೩.೬೫ ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ.
ಹಳೆಯ ಸೇತುವೆ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಕೆಲವರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಆದರೆ ನೂತನ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ತಯಾರಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಶಾಸಕ ಕೆ.ಜಿ. ಬೋಪಯ್ಯ ಸೇತುವೆ ಮತ್ತು ತಡೆಗೋಡೆ ಕಾಮಗಾರಿಯ ಪ್ರಸ್ತಾವನೆ ಮುಖ್ಯಮಂತ್ರಿ ಕಚೇರಿಗೆ ತಲುಪಿಸಿದ್ದು, ಹಣ ಮಂಜೂರಾಗಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಪಂ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದು, ಹಳೆಯ ಸೇತುವೆ ಕುಸಿದಿರುವ ಬಗ್ಗೆ ನಮಗೂ ಬೇಸರವಿದೆ. ಹೊಳೆಯಿಂದ ನಿಯಮ ಬಾಹಿರವಾಗಿ ಮರಳು ತೆಗೆದಿರುವುದೇ ಸೇತುವೆ ಕುಸಿಯಲು ಕಾರಣ. ಯಾರೂ ಸೇತುವೆ ವಿಚಾರದಲ್ಲಿ ಗೊಂದಲ ಸೃಷ್ಟಿಸಬಾರದು, ಅಲ್ಲದೆ ಅಲ್ಲಿರುವುದು ಪೈಸಾರಿ ಜಾಗ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನೂತನ ರಸ್ತೆ ನಿರ್ಮಾಣ ಮಾಡಲು ಶಾಸಕರ ನಿಧಿಯಲ್ಲಿ ೨೦ ಲಕ್ಷ ರೂ. ಲಭ್ಯವಿತ್ತು. ಆದರೆ, ಕೆಲವರು ಕಾಮಗಾರಿಗೆ ಅಸಹಕಾರ ನೀಡಿ ದ್ದರು. ವಿಪರ್ಯಾಸವೆಂದರೆ ಸಹಕಾರ ನೀಡದೆ ಇದ್ದವರು ಪ್ರತಿಭಟನೆ ನಡೆಸಿದ ಸಂಘಟನೆಯ ಸದಸ್ಯರಾಗಿದ್ದಾರೆೆಂದು ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.