ಸೋಮವಾರಪೇಟೆ : ಟೀಂ ತಾಕೇರಿ ಇವರ ವತಿಯಿಂದ ಹುತ್ತರಿ ಹಬ್ಬದ ಅಂಗವಾಗಿ ಕಿರಗಂದೂರು ಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪಂಚಾಯಿತಿ ಪ್ರೀಮಿಯರ್ ಲೀಗ್ 4ನೇ ವರ್ಷದ ಕ್ರಿಕೆಟ್ ಪಂದ್ಯದಲ್ಲಿ ಕೀರ್ತಿ ಪೊನ್ನಪ್ಪ ನಾಯಕತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೆ.ಟಿ.ಮಧು ನಾಯಕತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು. ಕೌಶಿಕ್ ನಾಯಕತ್ವದ ತಂಡ ತೃತೀಯ, ದರ್ಶನ್ ನಾಯಕತ್ವದ ತಂಡ ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಒಟ್ಟು 8 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು.
ಉತ್ತಮ ಬ್ಯಾಟ್ಸ್ ಮನ್ ಆಗಿ ಕೆ.ಟಿ. ಮಧು, ಉತ್ತಮ ಬೌಲರ್ ಆಗಿ ಕೀರ್ತಿ, ಉತ್ತಮ ಫೀಲ್ಡರ್ ಆಗಿ ಯಶ್ವಂತ್, ಉತ್ತಮ ಆಲ್ ರೌಂಡರ್ ಆಗಿ ದರ್ಶನ್ ಬಹುಮಾನ ಪಡೆದರು. ತೀರ್ಪುಗಾರರಾಗಿ ಶಶಾಂಕ್ ಹಾಗೂ ಮಂಜು ಕಾರ್ಯನಿರ್ವಹಿಸಿದರು.
ಕ್ರೀಡಾಕೂಟಕ್ಕೆ ಮಡಿಕೇರಿ ಜಿಲ್ಲಾಸ್ಪತ್ರೆಯ ಅರಿವಳಿಕೆ ವಿಭಾಗದ ವೈದ್ಯ ಡಾ. ಧನಂಜಯ ಮೇದಪ್ಪ ಚಾಲನೆ ನೀಡಿದರು. ಹಬ್ಬದ ಜತೆಗೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಂತಸದ ವಿಚಾರ. ಕ್ರೀಡೆ ಮನರಂಜನೆ ಮಾತ್ರ ಅಲ್ಲದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಬೆಳಸಲು ಸಹಕಾರಿಯಾಗಿದೆ. ಕ್ರೀಡೆ ಮನುಷ್ಯನಿಗೆ ಬಹಳ ಪ್ರಮುಖವಾಗಿದೆ ಎಂದರು.
ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಜಾಸ್ತಿ ಇದ್ದು, ಜನರಿಗೆ ಉತ್ತಮ ಸೌಲಭ್ಯ ಸಿಗುತ್ತಿಲ್ಲ. ರೋಗಿಗಳು ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿ ಹೆಚ್ಚಾದರೆ ಉತ್ತಮ ಚಿಕಿತ್ಸೆ ಸಿಗಲು ಸಾಧ್ಯವಿದೆ. ಯುವ ಜನತೆ ಜನಪ್ರತಿನಿಧಿಗಳ ಮೂಲಕ ವೈದ್ಯರ ನಿಯೋಜನೆಗೆ ಒತ್ತಡ ಹಾಕಬೇಕು ಎಂದರು.
ಒಕ್ಕಲಿಗರ ಯುವ ವೇದಿಕೆ ಹಾಗೂ ಸಿ ಆ್ಯಂಡ್ ಡಿ ಲ್ಯಾಂಡ್ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ತಾಕೇರಿ, ಕಿರಗಂದೂರು, ಬಿಳಿಗೇರಿ ಗ್ರಾಮದ ಯುವ ಜನತೆ ಕ್ರೀಡೆಯಲ್ಲಿ ಹಚ್ಚಿನದಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ಯುವ ಶಕ್ತಿ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮುನ್ನೆಲೆಗೆ ಬರಬೇಕು ಎಂದರು.
ತಾಕೇರಿ ಗ್ರಾಮದಲ್ಲಿ 2400 ಎಕರೆ ಸಿ ಮತ್ತು ಡಿ ಲ್ಯಾಂಡ್ ಇದೆ ಎಂಬ ವಿಚಾರ ಮಾಹಿತಿ ಹಕ್ಕಿನಿಂದ ತಿಳಿದು ಬಂದಿದ್ದು, ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆಯುತ್ತಿದೆ. ಡಿ. 20ರಂದು ಜಿಲ್ಲಾ ಕೇಂದ್ರದಲ್ಲಿ ಕರೆ ನೀಡಿರುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದರು.
ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ ಇದ್ದರು. ಕ್ರೀಡಾಕೂಟ ನಿರ್ವಹಣೆಯನ್ನು ಲಥನ್ ಕೊಮಾರಪ್ಪ, ಅಮೃತ್ ಹಾಗೂ ಟೀಂ ತಾಕೇರಿ ಸದಸ್ಯರು ನಿರ್ವಹಿಸಿದರು.