ತುಮಕೂರು: ಹೊರಗುತ್ತಿಗೆ ಹೆಸರಿನಲ್ಲಿ ಹಲವು ವರ್ಷಗಳಿಂದ ಕಂಪನಿಯ ಏಳಿಗೆಗೆ ಶ್ರಮಿಸಿದ ಕಾರ್ಮಿಕರನ್ನು ಆಡಳಿತ ಮಂಡಳಿ ಕಡೆಗಣಿಸಿರುವುದನ್ನು ವಿರೋಧಿಸಿ ಕಿರ್ಲೋಸ್ಕರ್ ಎಂಪ್ಲಾಯಿಸ್ ಅಸೋಸಿಯೇಷನ್ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ತಾಲೂಕಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಿರ್ಲೋಸ್ಕರ್ ಕಂಪನಿಯ 7ನೇ ಘಟಕದಲ್ಲಿ ಜು.28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಶನಿವಾರವೂ ಪ್ರತಿಭಟನೆ ಮುಂದುವರಿಯಿತು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕಿರ್ಲೊಸ್ಕರ್ ಎಂಪ್ಲಾಯಿಸ್ ಅಸೋಸಿಯೇಷನ್ ಘಟಕ 7ರ ಅಧ್ಯಕ್ಷ ಗಿರೀಶ್, 8 ವರ್ಷಗಳಿಂದ ಕಾರ್ಮಿಕರ ವೇತನ ಪರಿಷ್ಕರಣೆ ಮಾಡದೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಅಲ್ಲದೆ, ಕಳೆದ 2 ತಿಂಗಳಿನಿಂದ ಸುಮಾರು 36 ಕಾರ್ಮಿಕರನ್ನು ಲೇ ಆಫ್ ಹೆಸರಿನಲ್ಲಿ ಕಂಪನಿಯಿಂದ ಹೊರಗಿಟ್ಟಿದೆ ಎಂದು ಆರೋಪಿಸಿದರು.
14 ತಿಂಗಳುಗಳಿಂದ ಫಿಎಫ್ ಹಣವನ್ನು ಕಾರ್ಮಿಕರಿಂದ ಕಟಾವು ಮಾಡಿಕೊಂಡು ಕಂಪನಿಯ ಮತ್ತು ಕಾರ್ಮಿಕರ ಪಾಲನ್ನು ಇದುವರೆಗೂ ಕಟ್ಟಿಲ್ಲ. ಕಳೆದ ಒಂದು ವರ್ಷದಿಂದ ಎಲ್‌ಐಸಿ ಹಣವನ್ನೂ ಕಟ್ಟಿಲ್ಲ. 2 ತಿಂಗಳಿಂದ ವೇತನ ನೀಡಿಲ್ಲ. ಈಗ ಲಾಕ್‌ಔಟ್ ಮಾಡುವ ಬೆದರಿಕೆಯೊಡ್ಡಲಾಗುತ್ತಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಪ್ರಧಾನಕಾರ್ಯದರ್ಶಿ ಕುಮಾರ್, ಖಜಾಂಚಿ ಪದ್ಮನಾಭಯ್ಯ ಹಾಗೂ ಆನಂದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.