ಜಿಲ್ಲೆ

ಕೀರನಕಲ್ಲುಗುಡ್ಡೆ ಸಿಸಿ ರಸ್ತೆ ಕಾಮಗಾರಿ ಕಳಪೆ?

ರೇಷ್ಮೆ ನಗರ ಡೆಸ್ಕ್

ಕರ್ನಾಟಕ ಯುವ ರಕ್ಷಣಾ ಸಮಿತಿ ಆರೋಪ  | ಕಾವೇರಿ ನೀರಾವರಿ ನಿಗಮದ ವಿರುದ್ಧ ದೂರು

 ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಕೀರನಕಲ್ಲುಗುಡ್ಡೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಲಾಗುತ್ತಿರುವ ಸಿಸಿ ರಸ್ತೆ ಕಳಪೆ ಕಾಮಗಾರಿಯಾಗಿದೆ. ಈ ಸಂಬಂಧ ನಿಗಮದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ ಎಂದು ಕರ್ನಾಟಕ ಯುವ ರಕ್ಷಣಾ ಸಮಿತಿ ಅಧ್ಯಕ್ಷ ಕುಮಾರ್ ಆರೋಪಿಸಿದರು.

ರಾಮನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಪೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ. ಕೀರನಕಲ್ಲುಗುಡ್ಡೆ ಗ್ರಾಮದಲ್ಲಿ 2023-24ನೇ ಸಾಲಿಗೆ ಸಂಬಂಧಿಸಿದ್ದಂತೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಅಂದಾಜು ವೆಚ್ಚ 70 ಲಕ್ಷ ರೂ. ಆಗಿದ್ದು, ಟೆಂಡರ್ ಮೊತ್ತ 61.64 ಲಕ್ಷ ರೂ. ಆಗಿದೆ. ವಿಭೂತಿಕೆರೆ ಪಂಚಾಯಿತಿ ಸಂಬಂಧಿಸಿದಂತೆ ಅಂಜನಾಪುರ ಗ್ರಾಮದ ಸರ್ಕಾರಿ ಶಾಲೆಯಿಂದ ಗ್ರಾಮದ ಬೃಹತ್ ಮೋರಿಯ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 99.99 ಲಕ್ಷ ರು. ವೆಚ್ಚ ಮಾಡಲಾಗಿತ್ತು. ಈ ಕಾಮಗಾರಿಯೂ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು.

ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಅಮಾನತು ಪಡಿಸಿ ತನಿಖೆ ಮಾಡಬೇಕು. ಜತೆಗೆ, ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.