ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಗಣೇಶ ವಿಸರ್ಜನೆಗೆ ಡಿಜೆ ತರಿಸುವ ಹಣದಲ್ಲಿ ರಸ್ತೆ ದುರಸ್ತಿ ಆರಂಭಿಸಿದ್ದ ಗ್ರಾಮಸ್ಥರು ಕಾಮಗಾರಿ ಪೂರ್ಣಗೊಳಿಸಿ ಹಿಡಿದ ಹಟ ಸಾಧಿಸಿದ್ದಾರೆ. ಈ ಮೂಲಕ ಹೊದ್ದು ಮಲಗಿದ್ದ ಆಡಳಿತಕ್ಕೆ ತಮ್ಮ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.
ಹಲವು ವರ್ಷದಿಂದ ದುರಸ್ತಿ ಕಾಣದ ರಸ್ತೆಯಲ್ಲಿ ಸಂಚಾರ ದುಸ್ತರವಾಗಿತ್ತು. ಹಲವು ಬಾರಿ ಮನವಿ, ಪ್ರತಿಭಟನೆ ನಡೆಸಿದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ರಿಪೇರಿಗೆ ಮನಸ್ಸು ಮಾಡಿರಲಿಲ್ಲ. ಇದರಿಂದ ಬೇಸತ್ತ ಹಿಂದು ಮಹಾ ಗಣಪತಿ ಕಾಮನಕಟ್ಟೆ ಗೆಳೆಯರ ಬಳಗದವರು ಗಣೇಶ ವಿಸರ್ಜನೆಗೆ ಖರ್ಚು ಮಾಡಬೇಕಿದ್ದ ಹಣದಲ್ಲಿ ರಿಪೇರಿ ಕೆಲಸ ಆರಂಭಿಸಿದ್ದರು. ಕಿನ್ನಾಳ&ದೇವಲಾಪುರ&ಚಿಲವಾಡಗಿ ವರೆಗೆ 8 ಕಿ.ಮೀ. ರಸ್ತೆ ದುರಸ್ತಿ ಮಾಡಿದ್ದಾರೆ. ಜತೆಗೆ ಕಿನ್ನಾಳ&ಮಂಗಳೂರು ರಸ್ತೆಯನ್ನು 300 ಮೀಟರ್ವರೆಗೆ ದುರಸ್ತಿ ಮಾಡಿದ್ದಾರೆ.
ಗಜಾನನ ಮಿತ್ರ ಮಂಡಳಿ, ಮುದ್ಲಾಪುರ ಜಗಜ್ಯೋತಿ ಬಸವೇಶ್ವರ ಜಾಗೃತಿ ಸಮಿತಿ, ವಿನಾಯಕ ಮಿತ್ರ ಮಂಡಳಿ ಸೇರಿ ಗ್ರಾಮದ ಸರ್ವ ಜನರು ಸಹಕಾರ ನೀಡಿದ್ದಾರೆ. ಅಂಗಡಿಯವರು ನೆರವಾಗಿದ್ದಾರೆ. ಕಾಮಗಾರಿಗೆ 4 ಟಿಪ್ಪರ್, 2 ಡೋಜರ್, 2 ಟ್ರಾ$್ಯಕ್ಟರ್ ಬಳಸಿದ್ದು ಗ್ರಾಮಸ್ಥರೇ ನೀಡಿದ್ದಾರೆ. ವಿವಿಧ ಬೀಜ ಕಂಪನಿಯವರು, ಸಾರಿಗೆ ಬಸ್ ಚಾಲಕರು ತಮ್ಮ ಕೈಲಾದ ಧನ ಸಹಾಯ ಮಾಡಿ ಯುವಕರ ಬೆನ್ನು ತಟ್ಟಿದ್ದಾರೆ.
ಸೈನಿಕರಿಂದಲೂ ನೆರವು
ಜಮ್ಮುವಿನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಕಿನ್ನಾಳ ಗ್ರಾಮದ ಹಾಲೇಶ ಬನ್ನಿಕೊಪ್ಪ ಮತ್ತು ಅಸ್ಸಾಂನಲ್ಲಿರುವ ಮಹೇಶ ಬನ್ನಿಕೊಪ್ಪ ಸಹೋದರರು ಕೂಡಾ ವೀಡಿಯೋ ಕಾಲ್ ಮಾಡಿ, ಯುವಕರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಾಮಗಾರಿ ಕೈಗೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ5 ಸಾವಿರ ರೂ. ದೇಣಿಗೆ ನೀಡಿದರು. ಜರ್ಮನಿಯಲ್ಲಿ ಇಂಜಿನಿಯರ್ ಆಗಿರುವ ಗ್ರಾಮದ ಅನಿಲ್ ಬಿ. ಎಂಬುವರು 5001 ರೂ. ದೇಣಿಗೆ ನೀಡಿ, ಯುವಕರನ್ನು ಪ್ರೋತ್ಸಾಹಿಸಿದ್ದಾರೆ.