ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಆಗಿರುವುದು 
ಜಿಲ್ಲೆ

ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಿದ್ಧ, ಚಾರ 70 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಬ್ರಿಡ್ಜ್ ನಿರ್ಮಾಣ

ನರೇಂದ್ರ ಎಸ್.ಮರಸಣಿಗೆ

ಹೆಬ್ರಿ ತಾಲೂಕಿನ ಕೃಷಿಕರಿಗೆ ನೆರವಾಗುವಂತೆ ಚಾರ ನವೋದಯ ಶಾಲೆ ಬಳಿ ಸೀತಾನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಿದ್ಧವಾಗಿದೆ.

110 ಮೀಟರ್ ಉದ್ದದ, 12 ಮೀಟರ್ ಅಗಲದ ಅಣೆಕಟ್ಟು ನಿರ್ಮಾಣವಾಗಿದೆ. ಹೆಚ್ಚಿನ ಸಂಖ್ಯೆ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿ, ಕೃಷಿಕರು ತೋಟಗಳಿಗೆ, ಬಾವಿಯಲ್ಲಿ ನೀರು ಹೆಚ್ಚಾಗುವಿಕೆ, ಕುಡಿಯುವ ನೀರಿನ ಪೂರೈಕೆಗೆ ಇದರಿಂದ ಉಪಯೋಗವಾಗಲಿದೆ.
ಹಳೆಯ ಶಿಥಿಲ ಸೇತುವೆ ಒಡೆಯಲು ಸುಮಾರು ಎರಡು ತಿಂಗಳು ಗುತ್ತಿಗೆಯವರು ಕಷ್ಟಪಟ್ಟಿದ್ದಾರೆ. ಕಾಮಗಾರಿ ಆರಂಭವಾದ ಒಂದೇ ವರ್ಷದಲ್ಲಿ ಅತ್ಯಂತ ಸುಸಜ್ಜಿತ, ವ್ಯವಸ್ಥಿತ ಕಾಮಗಾರಿ ನಡೆದಿದೆ.

ವಾಹನ ಸವಾರರಿಗೆ ಮುಕ್ತಿ

ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದರಿಂದ ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ವಾಹನ ಸವಾರರು ಚಾರ ಬಸದಿರಸ್ತೆ ಸುತ್ತು ಬಳಸಿ ಹೋಗುತ್ತಿದ್ದರು. ಮಳೆಗಾಲದಲ್ಲಿ ಆಗಾಗ ರಸ್ತೆ ಸಮಸ್ಯೆ, ಅತಿ ಕಿರಿಯಾದ ರಸ್ತೆ ಇರುವುದರಿಂದ ಬಹಳಷ್ಟು ಸಮಸ್ಯೆ ಒಂದು ವರ್ಷದಿಂದ ಉಂಟಾಗಿದೆ. ಸೇತುವೆ ಲೋಕಾರ್ಪಣೆಯ ನಂತರ ಬಹಳ ಹತ್ತಿರದಿಂದ ಉತ್ತಮ ರೋಡ್ ವ್ಯವಸ್ಥೆಯೊಂದಿಗೆ ಹೆಬ್ರಿ ಸವಾರರು ತಲುಪಬಹುದು. ಬಹುತೇಕರು ಇದಕ್ಕಾಗಿ ಕಾಯುತ್ತಿದ್ದಾರೆ.

800 ಹೆಕ್ಟರ್ ಪ್ರದೇಶಗಳಿಗೆ ಉಪಯೋಗ

ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದರಿಂದ ಸುಮಾರು 800 ಹೆಕ್ಟರ್ ಪ್ರದೇಶಗಳಿಗೆ ನೀರಾವರಿಯಿಂದ ಉಪಯೋಗವಾಗಲಿದೆ. ಕೃಷಿ ತೋಟಗಳಿಗೆ, ಕುಡಿಯುವ ನೀರಿಗಾಗಿ, ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಈ ಮೂಲಕ ಅಂತರ್ಜಲ ವೃದ್ಧಿಗೆ ಸಹಾಯಕವಾಗುತ್ತದೆ.

ಸ್ವಯಂ ಚಾಲಿತ ಗೇಟುಗಳು

ಅಣೆಕಟ್ಟು 3 ಹಾಗೂ 5 ಮೀಟರ್‌ನ ಎರಡು ಸ್ತರದ ನೀರು ಶೇಖರಣೆಗೆ ವ್ಯವಸ್ಥೆ ಇದೆ. ಸುಮಾರು 20.41 ಎಂಸಿಎಫ್‌ಟಿ ನಷ್ಟು ನೀರು ಶೇಖರಣೆಯಾಗುತ್ತದೆ. ಎಂಟು ಸ್ವಯಂ ಚಾಲಿತ ಗೇಟುಗಳಿದ್ದು, ವ್ಯವಸ್ಥಿತ ರೀತಿಯಲ್ಲಿ ಅಳವಡಿಕೆ ನಡೆದಿದೆ.

ಮೈಸೂರು ಸರ್ಕಾರದ ಸೇತುವೆ

ಈ ಹಿಂದೆ ಈ ಜಾಗದಲ್ಲಿ ಇದ್ದ ಸೇತುವೆ 1965 ರಲ್ಲಿ ಅಂದರೆ 59 ವರ್ಷಗಳ ಹಿಂದೆ 4.30 ಲಕ್ಷ ರೂ. ವೆಚ್ಚದಲ್ಲಿ ಅಂದಿನ ಮೈಸೂರು ಸರ್ಕಾರದ ಕಾಲದಲ್ಲಿ ನಿರ್ಮಾಣವಾಗಿತ್ತು. ಕೆಲವೆಡೆ ಶಿಥಿಲವಾಗಿದ್ದು ಬಿಟ್ಟರೆ ಇನ್ನು ಕೆಲವು ವರ್ಷಗಳ ಕಾಲ ಉಪಯೋಗ ಮಾಡಬಹುದಾಗಿತ್ತು.

ಶೀಘ್ರ ಲೋಕಾರ್ಪಣೆ

ಶಾಸಕರು ಉಲ್ಲೇಖಿಸಿದಂತೆ ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಲೋಕಾರ್ಪಣೆ ಆಗಲಿದೆ. ಸಂಚಾರಕ್ಕೆ ಅನೇಕ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಈ ರಸ್ತೆ ಮೂಲಕ ಸಂಚರಿಸಲು ಅನುವು ಸಿಕ್ಕಿದಂತಾಗುತ್ತದೆ. ಜೂನ್ ತಿಂಗಳಿನಲ್ಲಿ ಇದರ ಲೋಕಾರ್ಪಣೆ ಆಗುವ ಸಂಭವಿದೆ.

ಸೇತುವೆ ಸಹಿತ ಕಿಂಡಿ ಅಣೆಕಟ್ಟು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಕಿಂಡಿ ಅಣೆಕಟ್ಟಿನಿಂದ ಅನೇಕ ರೈತರಿಗೆ ಉಪಯೋಗವಾಗಲಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಸುಮಾರು 257 ಕಿಂಡಿ ಅಣೆಕಟ್ಟುಗಳು ವರದಾನ ಆಗಿದೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ. ಸುಮಾರು 800 ಹೆಕ್ಟರ್ ಪ್ರದೇಶಗಳಿಗೆ ಪ್ರಯೋಜನ ದೊರಕಲಿದೆ.-ಸುನೀಲ್ ಕುಮಾರ್, ಶಾಸಕ
ಬಹಳ ಕಡಿಮೆ ಅವಧಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಸ್ಥಳೀಯವಾಗಿ ಅಂತರ್ಜಲ ವೃದ್ಧಿಗೆ, ಬಾವಿಯಲ್ಲಿ ನೀರು ಹೆಚ್ಚಾಗಲು ಇದು ಕಾರಣವಾಗುತ್ತದೆ. ಬಹುತೇಕ ಕೆಲಸ ಮುಗಿದಿದೆ. ಶೀಘ್ರದಲ್ಲಿ ಲೋಕಾರ್ಪಣೆಗೆ ಸಜ್ಜಾಗಿದೆ.-ಜೆ.ಎಂ.ರಾಥೋಡ್, ಎಇ, ಸಣ್ಣ ನೀರಾವರಿ ಇಲಾಖೆ ಉಡುಪಿ
ಕೇವಲ ಒಂದು ವರ್ಷದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ವಾಗಿರುವುದರಿಂದ ನಮಗಂತೂ ಬಹಳ ಉಪಯೋಗವಾಯಿತು. ಸಮರ್ಪಕ ರಸ್ತೆ ಕೊರತೆಯಿಂದ ರಿಕ್ಷಾ ಸುತ್ತು ಬಳಸಿ ಕೊಂಡೊಯುತ್ತಿದ್ದೆ. ರಸ್ತೆ ಉತ್ತಮವಾಗಿರದ ಕಾರಣ ಸಂಚಾರ ದುಸ್ತರವಾಗಿತ್ತು. ಇದರ ಲೋಕಾರ್ಪಣೆಗೆ ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆ.-ಪ್ರಸನ್ನ, ಆಟೋ ಚಾಲಕ https://www.vijayavani.net/inauguration-of-new-well-equipped-science-laboratory-room