ಜಿಲ್ಲೆ

ಕಟ್ಟಡ ತ್ಯಾಜ್ಯ ಎಸೆಯುವ ರಸ್ತೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್ ಹಿಂಬದಿಯಲ್ಲಿ ನ್ಯೂ ಕಾಟನ್ ಮಾರ್ಕೆಟ್ ಮೂಲಕ ಹೋಗುವ ರಸ್ತೆ ಅನಾಥವಾಗಿದ್ದು, ಕೆಲವರಿಗೆ ತ್ಯಾಜ್ಯ ಎಸೆಯುವ ತಾಣವಾಗಿ ಪರಿಣಮಿಸಿದೆ.

ಕಳೆದ ಹಲವು ತಿಂಗಳಿಂದ ಇಲ್ಲಿ ಕೆಲವರು ಕಟ್ಟಡ ತ್ಯಾಜ್ಯವನ್ನು ಟ್ರ್ಯಾಕ್ಟರ್, ಮಿನಿ ಲಾರಿ ಮೂಲಕ ತಂದು ರಸ್ತೆ ಬದಿ ಸುರಿಯುತ್ತಿದ್ದಾರೆ.

ರಸ್ತೆ ಬದಿ ಒಂದಿಷ್ಟು ಇಳಿಜಾರು ಹಾಗೂ ತಗ್ಗು ಪ್ರದೇಶ ಇದ್ದು, ತ್ಯಾಜ್ಯ ಅದರಲ್ಲಿ ಸರಿಯಾಗಿ ಸಮತಟ್ಟುಗೊಳಿಸಬೇಕು. ಆದರೆ, ಅಲ್ಲಲ್ಲಿ ಗುಡ್ಡೆ ಹಾಕಿ ಕೈಬಿಡಲಾಗಿದೆ.

ಅಕ್ಕಪಕ್ಕದಲ್ಲಿ ಬಹುತೇಕ ರಸ್ತೆಗಳು ಕಾಂಕ್ರಿಟ್ ಆಗಿವೆ. ಆದರೆ, ಕಿಮ್ಸ್ ಹಿಂಬದಿಯ ರಸ್ತೆ ಹಾಗೇ ಬಿಡಲಾಗಿದೆ.

ಇಲ್ಲಿ ಮೊಳಕಾಲುದ್ದದ ತಗ್ಗು ಗುಂಡಿಗಳಿವೆ. ಬೇಸಿಗೆಯಲ್ಲಿ ಧೂಳು ಹಾರುತ್ತದೆ. ಮಳೆಗಾಲ ಆರಂಭವಾದರೆ ಗುಂಡಿಮಯ ರಸ್ತೆಯಲ್ಲಿ ಸವಾರರು ಯಾತನೆ ಅನುಭವಿಸಬೇಕು.

ಇದೇ ರಸ್ತೆಯಲ್ಲಿ ಅಕ್ಕಪಕ್ಕ ಹತ್ತಾರು ಗೂಡಂಗಡಿಗಳು ತಲೆ ಎತ್ತಿವೆ. ಇದರಿಂದ ಟ್ರಾಫಿಕ್ ಜಾಮ್ ಸಾಮಾನ್ಯವಾಗುತ್ತಿದೆ. ಕೆಲವೊಮ್ಮೆ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೂ ತೊಂದರೆಯಾಗುತ್ತಿದೆ.

ಮಹಾನಗರ ಪಾಲಿಕೆ ಇನ್ನಾದರೂ ಎಚ್ಚೆತ್ತು ರಸ್ತೆ ಸುಧಾರಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.