ಹುಬ್ಬಳ್ಳಿ: ಪ್ರತಿ ವರ್ಷ ಸ್ಟೈಫಂಡ್ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ನೀಡಿದ ಕರೆ ಹಿನ್ನೆಲೆಯಲ್ಲಿ, ಇಲ್ಲಿಯ ಕಿಮ್ಸ್‌ನ ಕಿರಿಯ ವೈದ್ಯರ ಸಂಘದಿಂದ ಸೋಮವಾರ ತುರ್ತುಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಬೆಳಗ್ಗೆ ಕಿಮ್ಸ್ ಮುಂದೆ ಪ್ರತಿಭಟನೆ ಆರಂಭಿಸಿದ ಕಿರಿಯ ವೈದ್ಯರು, ನಂತರ ಕಿಮ್ಸ್ ಗೇಟ್ ಮುಂಭಾಗದ ಮಹಾತ್ಮಗಾಂಧಿ ಪುತ್ಥಳಿವರೆಗೆ ಮೆರವಣಿಗೆ ನಡೆಸಿದರು. ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಭದ್ರತೆ ಕಲ್ಪಿಸಬೇಕು. ವೈದ್ಯಕೀಯ ಸ್ನಾತಕೋತ್ತರ ಪದವಿಯ ಶುಲ್ಕವನ್ನು ಕಡಿಮೆಗೊಳಿಸಬೇಕು. ಪ್ರತಿ ವರ್ಷವೂ ಸ್ಟೈಫಂಡ್ ಹೆಚ್ಚಿಸಬೇಕು ಎಂದು ಪ್ರತಿಭಟನಾ ನಿರತ ಕಿರಿಯ ವೈದ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಗ್ರಹಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿನ ವೈದ್ಯಕೀಯ ಪಿಜಿಗಳಿಗೆ ರಾಜ್ಯ ಸರ್ಕಾರ ನೀಡುವ ಸ್ಟೈಫಂಡ್ ಕಡಿಮೆ ಇದೆ. ಪ್ರತಿ ವರ್ಷ ಪಿಜಿ ಅಧ್ಯಯನ್ನಕಾಗಿ ಕಟ್ಟುವ ಶುಲ್ಕ ದುಬಾರಿ ಇದೆ. ಸರ್ಕಾರದಿಂದ ಕೊಡುವ ಸೈಫಂಡ್ ಜೀವನ ನಡೆಸಲು ಸಾಲುವುದಿಲ್ಲ. ಕೂಡಲೇ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಸಂಜೆ ವೇಳೆ ಕ್ಯಾಂಡಲ್ ಲೈಟ್ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಡಾ. ಸುಹಾಸ ಎಸ್.ಟಿ., ರಾಜ್ಯ ಸಂಚಾಲಕ ಡಾ. ಆದರ್ಶ ಇ.ಎಚ್., ಪ್ರಧಾನ ಕಾರ್ಯದರ್ಶಿ ಡಾ. ಆದರ್ಶಾ ವಿ., ಉಪಾಧ್ಯಕ್ಷೆ ಡಾ. ಹರ್ಷಿತಾ, ಡಾ. ದೀಕ್ಷಂತ್, ಡಾ. ಸುನಿಲ್ ಆರ್., ಡಾ. ರಕ್ಷಿತ್ ಎಂ.ಸಿ., ಡಾ. ರಾಮಚಂದ್ರ , ಡಾ. ವಿಭವ್, ಡಾ. ಪ್ರದೀಪ್ ಸೇರಿದಂತೆ ಬಹಳಷ್ಟು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.