ಜಿಲ್ಲೆ

ಕಿಮ್ಸ್ ವೈದ್ಯರ ಸೇವೆ ಶ್ಲಾಘನೀಯ

ಮರಿದೇವ ಹೂಗಾರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಕಿಮ್ಸ್ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಅವರ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ನಗರದ ಕಿಮ್ಸ್ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವತಿಯಿಂದ ಸಿಎಸ್‌ಆರ್ ನಿಧಿಯಡಿ 1 ಕೋಟಿ 75 ಲಕ್ಷ ರೂ. ವೆಚ್ಚದ ವೈದ್ಯಕೀಯ ಉಪಕರಣಗಳಾದ ನ್ಯೂಯೋನಟಲ್ ಇನ್ಕುಬೇಟರ್ಸ್ ಮತ್ತು ಆಪರೇಟಿಂಗ್ ಲ್ಯಾಪ್ರೊಸ್ಕೋಪಿ ಖರೀದಿಗಾಗಿ ಗುರುವಾರ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ 4 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಾರೆ. ಸಾವಿರಕ್ಕೂ ಅಧಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಅನೇಕರು ಗುಣಮುಖರಾಗಿದ್ದಾರೆ. ದೇಶದಲ್ಲಿ 100 ಗರ್ಭಿಣಿಯರಲ್ಲಿ 97 ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ ಹೆರಿಗೆ ಸಂದರ್ಭದಲ್ಲಿ 1000ರಲ್ಲಿ 24 ಮಕ್ಕಳು ಮೃತಪಡುತ್ತಿದ್ದಾರೆ. ಸುಧಾರಿತ ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಬೇಕು. ಹೀಗಾಗಿ ಕಿಮ್ಸ್‌ಗೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಗದಗ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಕಿಮ್ಸ್ ಉತ್ತರ ಕರ್ನಾಟಕದ ಸಂಜೀವಿನಿ. ಇಲ್ಲಿನ ವೈದ್ಯರ ಸೇವೆ ಅನನ್ಯವಾದುದು. ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಸೇವೆ ದೊರೆಯುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ನಾನು ಇಲ್ಲಿಯೇ ದಾಖಲಾಗಿದ್ದೆ. ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರಾಗಿಸಿದರು. ಹೆಚ್ಚಿನ ಪ್ರಮಾಣದ ಅನುದಾನ ಈ ಸಂಸ್ಥೆಗೆ ದೊರೆಯಬೇಕು. ವೈದ್ಯರು ಮಾನವೀಯತೆ, ಮನುಷ್ಯತ್ವ ಹೊಂದಿರಬೇಕು. ಹೊಸ ಆವಿಷ್ಕಾರ, ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು.
ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ಕಿಮ್ಸ್‌ಗೆ ಬಹಳಷ್ಟು ಹೊರ ಮತ್ತು ಒಳ ರೋಗಿಗಳಿಗೆ ಬರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ನೀಡಿದೆ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಎ.ಎಂ. ಕುಲಕರ್ಣಿ, ಬಿ.ಜಿ. ವಸ್ತ್ರದ, ಡಾ.ಸಿ.ಎಸ್.ಪಾಟೀಲ, ಐ.ಎಸ್. ಪಾಟೀಲ, ಮುಖಂಡರಾದ ಅನಿಲಕುಮಾರ ಪಾಟೀಲ, ಶರಣಪ್ಪ ಕೊಟಗಿ, ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಇತರರು ಉಪಸ್ಥಿತರಿದ್ದರು.
ಸುಕನ್ಯಾ ಪ್ರಾರ್ಥಿಸಿದರು. ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಸ್ವಾಗತಿಸಿದರು. ಡಾ. ರಾಜಶೇಖರ ದ್ಯಾಬೇರಿ ನಿರೂಪಿಸಿದರು.