ಜಿಲ್ಲೆ

ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಹತ್ಯೆ

ಮರಿದೇವ ಹೂಗಾರ

ಹುಬ್ಬಳ್ಳಿ: ಹಳೇ ದ್ವೇಷ, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಖಂಡೇಪೂಜೆ ದಿನವೇ ಯುವಕನೊಬ್ಬನನ್ನು ಆತನ ಸ್ನೇಹಿತರೇ ಮಾರಕಾಸ್ತ್ರಗಳಿಂದ 30ಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದ ಘಟನೆ ಗೋಪನಕೊಪ್ಪದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಗೋಪನಕೊಪ್ಪದ ಶಿವರಾಜ ಕಮ್ಮಾರ (22) ಕೊಲೆಯಾದ ಯುವಕ. ಈತ ಗುರುವಾರ ಗೋಪನಕೊಪ್ಪದ ಕರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಶಿವರಾಜ ಹಾಗೂ ಸುದೀಪ ಎಂಬ ಯುವಕರ ಜತೆಗೆ ಜಗಳ ಮಾಡಿಕೊಂಡಿದ್ದ. ಈ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಅಲ್ಲೇ ಇದ್ದ ಕೆಲವರು ಇಬ್ಬರನ್ನು ತಡೆದು ಬುದ್ದಿ ಹೇಳಿ ಕಳುಹಿಸಿದ್ದರು. ಆದರೆ, ಶುಕ್ರವಾರ ರಾತ್ರಿ ಏಕಾಏಕಿ ಆತನ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಶಿವರಾಜ ಮನೆಯಲ್ಲಿ ಹಬ್ಬದ ನಿಮಿತ್ತ ಕುರಿ ಕಡಿದು ಅಡುಗೆ ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನದವರೆಗೂ ತನ್ನ ಸ್ನೇಹಿತರ ಜತೆ ಸೇರಿ ದೇವರಿಗೆ ನೈವೇದ್ಯ ಅರ್ಪಿಸಿ ತನ್ನ ಗೆಳೆಯರಿಗೆ ಊಟ ಮಾಡಿಸಿ ಕಳುಹಿಸಿದ್ದ. ರಾತ್ರಿ 10 ಗಂಟೆಗೆ ಊಟ ಮಾಡಿ ಇಲ್ಲೇ ಹೊರಗಡೆ ಹೋಗಿ ಬರ್ತೀನಿ ಅಂತ ಹೇಳಿದ್ದವ ಮನೆ ಬಿಟ್ಟು ಹೋದ ಕೆಲವೇ ಕೆಲವು ನಿಮಿಷಗಳಲ್ಲಿ ಕೊಲೆಗೀಡಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಶಿವರಾಜನ ಸ್ನೇಹಿತರು ಹೇಳುತ್ತಿದ್ದಾರೆ. ನಿನ್ನೆ ಜಗಳ ತೆಗೆದ ಸುದೀಪ ಎಂಬಾತ, ‘ನಿನ್ನ ನಾಳೆ ನೋಡ್ಕೊತೀನಿ..’ ಎಂದು ಶಿವರಾಜಗೆ ಧಮ್ಮಿ ಹಾಕಿದ್ದ. ಆತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಶವಾಗಾರಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳಿಗೆ ಗುಂಡೇಟು: ಶಿವರಾಜನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಆರೋಪದಡಿ ಸುದೀಪ ರಾಯಪುರ ಮತ್ತು ಕಿರಣ ಜಟ್ಟನಪ್ಪನವರ ಎಂಬುವವರನ್ನು ಬಂಧಿಸಲಾಗಿತ್ತು. ಇವರಿಬ್ಬರು ಇನ್ನುಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ರೈಲ್ವೆ ಕ್ವಾರ್ಟರ್ಸ್ ಬಳಿ ಶನಿವಾರ ಕರೆದುಕೊಂಡು ಹೋಗಲಾಗಿತ್ತು. ಇದೇ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಆರು ಜನ ಪೊಲೀಸರು ಹಾಗೂ ಆರೋಪಿಗಳನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಕಾರ್ತಿಕ, ಅಭಿಷೇಕ ಸೇರಿ ಇನ್ನುಳಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.