ಶಿವಮೊಗ್ಗ: ಶಿರಾಳಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನನ್ನು ಬರ್ಬರವಾಗಿ ಹತ್ಯೆ ಮಾಡಿ ಚೀಲದಲ್ಲಿ ತುಂಬಿ ನದಿಗೆ ಎಸೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಶಿಕಾರಿಪುರ ತಾಲೂಕಿನ ನಾಗೀಹಳ್ಳಿ ಗ್ರಾಮದ ಕೃಷ್ಣಪ್ಪ(33) ಹತ್ಯೆಯಾದ ವ್ಯಕ್ತಿ. ಅದೇ ಗ್ರಾಮದ ಕಿರಣ್ ಕೊಲೆಯ ಮಾಸ್ಟರ್‌ಮೈಂಡ್. ಕಿರಣ್ ಸೇರಿ ಆತನ ಸ್ನೇಹಿತರಾದ ಗಣೇಶ್ ಮತ್ತು ಪ್ರತಾಪ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಜಂಬಿಟ್ಟಿಗೆ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಗಣಪತಿ ಹಬ್ಬದ ದಿನವೇ ಕೆಲಸ ಕೇಳಿಕೊಂಡು ಬರಲು ಹೋಗಿದ್ದ. ಆದರೆ ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಶಿರಾಳಕೊಪ್ಪ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಕೃಷ್ಣಪ್ಪ ಪತ್ನಿ ನೀಡಿದ ಸುಳಿವಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಕಾದಿತ್ತು. ಅದೇ ದಿನ ಕೃಷ್ಣಪ್ಪನ ಕೊಲೆಯಾಗಿತ್ತು. ಕಳೆದ ಸೆ.7ರಂದು ಹತ್ಯೆ ನಡೆಸಲಾಗಿದ್ದು ನಾಗೀಹಳ್ಳಿ ಗ್ರಾಮದ ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.