ಪುತ್ತೂರು: ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ೬೮ನೇ ವರ್ಷದ ಕಿಲ್ಲೆ ಮೈದಾನದ ಗಣೇಶೋತ್ಸವ ಆ.೨೭ರಿಂದ ಸೆ.೨ರವರೆಗೆ ನಡೆಯಲಿದೆ. ಭಕ್ತರ ಸರ್ವತೋಮುಖ ಅಭಿವೃದ್ಧಿ ಸಂಕಲ್ಪಿಸಿ, ಮೊದಲ ಬಾರಿಗೆ ಬಾಲ ಗಣಪತಿ ಹೋಮ ಆಯೋಜಿಸಲಾಗಿದೆ.
೩೧ರಂದು ಮುಂಜಾನೆ ೪.೪೫ಕ್ಕೆ ‘ಬಾಲ ಗಣಪತಿ ಹೋಮ’ ಆರಂಭವಾಗಿ, ಸೂರ್ಯೋದಯಕ್ಕೂ ಮುನ್ನ ಪೂರ್ಣಾಹುತಿಗೊಳ್ಳಲಿದೆ. ೨೭ರಂದು ಬೆಳಗ್ಗೆ ೧೧ಕ್ಕೆ ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಿಂದ ಶ್ರೀ ಮಹಾಗಣಪತಿ ಮೂರ್ತಿ ಶೋಭಾಯಾತ್ರೆಗೆ ಚಾಲನೆ ದೊರೆಯಲಿದ್ದು, ಕಿಲ್ಲೆ ಮೈದಾನದ ಮಂಟಪದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ಸವದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸೆ.೨ರಂದು ೧೦೮ ಕಾಯಿ ಗಣಪತಿ ಹೋಮ, ಸಂಜೆ ದೇವರ ಬಲಿ ಉತ್ಸವ, ರಕ್ತೇಶ್ವರಿ ದೈವದ ಕೋಲ, ಸುಡುಮದ್ದು ಪ್ರದರ್ಶನದೊಂದಿಗೆ ಗಣೇಶನ ಶೋಭಾಯಾತ್ರೆ ನಡೆಯಲಿದೆ. ರಕೇಶ್ವರಿ ಭೂತವು ಪೂಜಾ ಸ್ಥಳದಲ್ಲಿ ಕಟ್ಟಲ್ಪಟ್ಟು ಜಲಸ್ತಂಭನದ ಕೆರೆಯ ತನಕ ಸಾಗಲಿದೆ. ಅಣ್ಣಪ್ಪ ಪಂಜುರ್ಲಿ ಭೂತವು ಕಲ್ಲೇಗದ ದೈವದ ಬನದಿಂದ ಹೊರಟು ವಿಸರ್ಜನಾ ಸ್ಥಳದ ತನಕ ಬರಲಿದೆ. ಶೋಭಾಯಾತ್ರೆ ವೇಳೆ ಕಲ್ಲೇಗದ ಕಲ್ಲುರ್ಟಿ- ಕಲ್ಕುಡ ದೈವಗಳಿಗೆ ತಂಬಿಲ ನೆರವೇರಲಿದೆ.
‘ಮಕ್ಕಳ ಗಣಪತಿ’ಯಿಂದ ಮಹೋತ್ಸವದವರೆಗೆ
ದಿ.ಡಾ.ಕೆ.ಹನುಮಂತ ಮಲ್ಯರ ಮುಂದಾಳತ್ವದಲ್ಲಿ ಉತ್ಸಾಹಿ ಮಕ್ಕಳೊಂದಿಗೆ ಬೋರ್ಡ್ ಶಾಲೆಯ ಜಗಲಿಯಲ್ಲಿ ೬೮ ವರ್ಷಗಳ ಹಿಂದೆ ಗಣೇಶೋತ್ಸವ ಪ್ರಾರಂಭವಾಗಿದೆ. ಆ ಸಮಯದಲ್ಲಿ ‘ಮಕ್ಕಳ ಗಣಪತಿ’ ಎಂದೇ ಪ್ರಸಿದ್ಧವಾಗಿತ್ತು. ಕಾಲಕ್ರಮೇಣ ಕೋರ್ಟ್ ಮೈದಾನಕ್ಕೆ ಸ್ಥಳಾಂತರಗೊಂಡು, ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್.ಕಿಲ್ಲೆ ಹೆಸರಿನಿಂದ ‘ಕಿಲ್ಲೆ ಗಣಪ’ ಎಂದು ಖ್ಯಾತಿ ಪಡೆಯಿತು.
ಹರಕೆಯ ಚಿನ್ನಕ್ಕೆ ಹೊಸ ರೂಪ
ಕಿಲ್ಲೆ ಗಣಪತಿ ಈ ಬಾರಿ ಸ್ವರ್ಣಲೇಪಿತ ಆಭರಣಗಳೊಂದಿಗೆ ದರ್ಶನ ನೀಡಲಿದ್ದಾನೆ. ಭಕ್ತರು ಸಮರ್ಪಿಸಿದ್ದ ಚಿನ್ನದ ಹೂವುಗಳು, ಪದಕಗಳು, ಸಣ್ಣಪುಟ್ಟ ಆಭರಣಗಳನ್ನು ದೇವತಾ ಸಮಿತಿ ಕರಗಿಸಿ, ಹಿಂದೆ ಇದ್ದ ಬೆಳ್ಳಿಯ ಸೊಂಡಿಲು, ಕಿರೀಟ, ಕರ್ಣದ್ವಯಗಳಿಗೆ ಸ್ವರ್ಣಲೇಪನ ಮಾಡಲಾಗಿದೆ.
ಮಕ್ಕಳ ಭವಿಷ್ಯಕ್ಕಾಗಿ ಬಾಲ ಗಣಪತಿ ಹೋಮ ಆಯೋಜಿಸಲಾಗಿದೆ. ಭಕ್ತರು ನೀಡಿದ ದೊಡ್ಡ ಗಾತ್ರದ ಸರಗಳು ಮತ್ತು ಇತರ ಆಭರಣಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಕೇವಲ ಸಣ್ಣ ಗಾತ್ರದ ಚಿನ್ನದ ವಸ್ತುಗಳನ್ನು ಕರಗಿಸಿ, ಆಭರಣಗಳಿಗೆ ಲೇಪನ ಮಾಡಲಾಗಿದೆ.
| ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ದೇವತಾ ಸಮಿತಿ ಅಧ್ಯಕ್ಷ