ಜಿಲ್ಲೆ

ಮಕ್ಕಳ ಪ್ರೌಢಿಮೆ ಗುರುತಿಸಲು ಮುಂದಾಗಿ

ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಸಲಹೆ

  • ಕಿಕ್ಕೇರಿ : ಮಕ್ಕಳ ಪ್ರೌಢಿಮೆ ಗುರುತಿಸಲು ಶಿಕ್ಷಕರು ಮುಂದಾಗಬೇಕು ಎಂದು ಕಿಕ್ಕೇರಿ ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ ಚಲುವ ನಾರಾಯಣಸ್ವಾಮಿ ತಿಳಿಸಿದರು. ಸಾಸಲು ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಬಹು ಮುಖ್ಯ. ಅಧ್ಯಯನಕ್ಕೆ ಪ್ರತಿಭಾ ಕಾರಂಜಿ ಬಲು ಸಹಕಾರಿ. ಶಾಲಾ ಹಂತದಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಿದರೆ ನಾಳೆ ಅವರು ನಾಡಿಗೆ ಕೀರ್ತಿ ತರಲಿದ್ದಾರೆ ಎಂದರು.ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಎನ್ನುವುದು ಸಾಧಕನ ಸ್ವತ್ತು. ಮಕ್ಕಳು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ.ಇದಕ್ಕೆ ಪೂರಕ ಚಟುವಟಿಕೆ ಅಗತ್ಯ ಎಂದರು. ಗುರಿ ಇಲ್ಲದ ವಿದ್ಯೆ ಭವಿಷ್ಯಕ್ಕೆ ಭೂಷಣವಾಗಲಾರದು. ಓದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಪ್ರೇರಕವಾಗಲಿದೆ. ಹಾಗಾಗಿ ಮಕ್ಕಳಲ್ಲಿನ ನೈಜ್ಯ ಪ್ರತಿಭೆ ಹೆಕ್ಕಿ ತೆಗೆಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು. ಚಿಣ್ಣರಲ್ಲಿ ನಮ್ಮ ಸಂಸ್ಕೃತಿಯ ಬೀಜ ಬಿತ್ತಿದರೆ ಅದು ಮುಂದೆ ಹೆಮ್ಮರವಾಗಿ ಬೆಳೆದು ಸುಭದ್ರ ಸಮಾಜ ನಿರ್ಮಿಸಲು ಸಹಕಾರವಾಗಲಿದೆ ಎಂದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಜಾನಪದ, ಭಾವಗೀತೆ, ದೇವರನಾಮ, ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.