ಮೈಸೂರು: ಕಿಡ್ನಿ ಕಸಿ ಮಾಡಲು ಸರ್ಕಾರದ ಯೋಜನೆ ಅಳವಡಿಸಿಕೊಳ್ಳುವ ಮೂಲಕ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲು ನಗರದ ಸಿಗ್ಮಾ ಆಸ್ಪತ್ರೆ ಮುಂದಾಗಿದೆ.
ನಗರದ ಸರಸ್ವತಿಪುರಂನಲ್ಲಿ 2014ರಲ್ಲಿ ಸೇವೆ ಆರಂಭಿಸಿದ ಆಸ್ಪತ್ರೆಯಲ್ಲಿ ಕಿಡ್ನಿಗೆ ಸಂಬಂಧಿಸಿದ ಚಿಕಿತ್ಸೆ ಮಾಡಲಾಗುತ್ತಿತ್ತು. ಸರ್ಕಾರದಿಂದ ಕಿಡ್ನಿ ಕಸಿಗೂ ಅನುಮತಿ ದೊರೆತ ಬಳಿಕ ನಾಲ್ಕು ವರ್ಷದಲ್ಲಿ ಯಶಸ್ವಿಯಾಗಿ 35 ಜನರಿಗೆ ಕಿಡ್ನಿಕಸಿ (ಟ್ರಾನ್ಸ್‌ಪ್ಲಾಂಟೇಷನ್) ನಡೆಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕರೂ ಆದ ಮೂತ್ರಶಾಸ್ತ್ರಜ್ಞ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ.ಕೆ.ಎಂ.ಮಾದಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
34 ವರ್ಷಗಳಿಂದ ಕಿಡ್ನಿ ಚಿಕಿತ್ಸೆ ನೀಡುತ್ತಿದ್ದು, 1993ರಲ್ಲಿ ಪ್ರಥಮ ಬಾರಿಗೆ ಮೈಸೂರಿನಲ್ಲಿ ನಾನು ಕಿಡ್ನಿ ಕಸಿ ಆರಂಭಿಸಿದ್ದು, ಇದೂವರೆಗೆ 400ಕ್ಕೂ ಹೆಚ್ಚು ಜನರಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ. ಈಗ ಸಿಗ್ಮಾದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ ತಿಳಿಸಿದರು.
ಕಳೆದ ಜನವರಿಯಿಂದ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ನಮ್ಮ ಆಸ್ಪತ್ರೆಗೂ ಅನುಮತಿ ದೊರೆತಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಸುಮಾರು 4.5 ಲಕ್ಷ ರೂ. ವೆಚ್ಚವಾಗುವ ಕಿಡ್ನಿ ಕಸಿಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಈಗಾಗಲೇ 15 ಜನರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು.
ಆಸ್ಪತ್ರೆಯಲ್ಲಿ ನಡೆದಿರುವ ಶಸ್ತ್ರಚಿಕಿತ್ಸೆಯಲ್ಲಿ 33 ಜನರಿಗೆ ರಕ್ತ ಸಂಬಂಧದಲ್ಲಿ ನೀಡಿದ್ದರೆ, ಇಬ್ಬರಿಗೆ ಮಿದುಳು ನಿಷ್ಕ್ರಿಯೆಗೊಂಡ ವ್ಯಕ್ತಿಗಳ ಅಂಗಾಂಗ ದಾನದಿಂದ ಕಿಡ್ನಿ ಕಸಿ ಮಾಡಲಾಗಿದೆ. ಒಬ್ಬರು ಬೇರೆಯವರು ನೀಡಿದ್ದಾರೆ. ಕಿಡ್ನಿ ಕಸಿ ಮಾಡಿಕೊಂಡವರಿಗೆ ಮಾತ್ರವಲ್ಲದೇ ಕಿಡ್ನಿ ನೀಡಿದವರಿಗೂ ಚಿಕಿತ್ಸೆ, ಔಷಧವನ್ನು ಉಚಿತವಾಗಿಯೇ ನೀಡಲಾಗುವುದು ಎಂದು ಹೇಳಿದರು.
2020ರಲ್ಲಿ 3 ಜನರಿಗೆ, 2021ರಲ್ಲಿ 5 ಜನರಿಗೆ, 2022ರಲ್ಲಿ 10 ಜನರಿಗೆ ಹಾಗೂ 2023ರ ಅಕ್ಟೋಬರ್‌ವರೆಗೆ 17 ಜನರಲ್ಲಿ ಕಿಡ್ನಿ ಕಸಿ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆ ಆಗುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ರಾಜ್ಯದ ಯಾವುದೇ ಭಾಗದ ಜನರು ಉಚಿತ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ನೆಫ್ರಾಲಜಿಸ್ಟ್ ಡಾ.ಅನಿಕೇತ್ ಪ್ರಭಾಕರ್ ಮಾತನಾಡಿ, ರಾಜ್ಯ ಸರ್ಕಾರದ ಜೀವ ಸಾರ್ಥಕತೆ ಕಾರ್ಯಕ್ರಮದಡಿ ಮಿದುಳು ನಿಷ್ಕ್ರಿಯವಾದ ವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಕಸಿ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಒಂದೇ ರಕ್ತದ ಗುಂಪು ಇರುವವರಿಗೆ ಮಾತ್ರ ಕಿಡ್ನಿ ಕಸಿ ಮಾಡಲಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ರಕ್ತ ಗುಂಪು ವಿರುದ್ಧವಾಗಿರುವ 6 ರೋಗಿಗಳಿಗೆ ಯಶಸ್ವಿ ಕಸಿ ಮಾಡಲಾಗಿದೆ ಎಂದರು.
ಸಾಮಾನ್ಯವಾಗಿ ಮಧುಮೇಹದಿಂದ ಕಿಡ್ನಿ ಸಮಸ್ಯೆ ಬರುತ್ತದೆ. 10 ವರ್ಷದೊಳಗೆ ನಿಯಂತ್ರಣಕ್ಕೆ ಬರದಿದ್ದರೆ ತೊಂದರೆ ಆಗುತ್ತದೆ. ಮಧುಮೇಹ ಇಲ್ಲದವರಿಗೂ ಕಿಡ್ನಿ ಸಮಸ್ಯೆ ಬರಬಹುದು. ನಿರಂತರವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದಲೂ ಕಿಡ್ನಿ ಸಮಸ್ಯೆ ಉಂಟಾಗುತ್ತದೆ ಎಂದರು.
ಮೂತ್ರಶಾಸ್ತ್ರಜ್ಞ, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ತಜ್ಞ ಡಾ. ಡಿ.ಎನ್. ಸೋಮಣ್ಣ ಮಾತನಾಡಿ, ಕಿಡ್ನಿ ಕಸಿಗೆ ಇತರ ಅಸ್ಪತ್ರೆಗಳಲ್ಲಿ 12ರಿಂದ 15 ಇಂಚು ಉದ್ದ ಕತ್ತರಿಸಿ ಕಿಡ್ನಿ ತೆಗೆಯಬೇಕಿದೆ. ಇದರಿಂದ ಕಿಡ್ನಿ ಕೊಡುವವರಿಗೆ ತುಂಬ ನೋವು, ಗಾಯ ವಾಸಿಯಾಗಲು ಬಹಳ ದಿನ ಬೇಕಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ಆಧುನಿಕ ಲ್ಯಾಪ್ರೊಸ್ಕೊಪಿಕ್ ವಿಧಾನದಿಂದ ಹೆಚ್ಚು ನೋವಿಲ್ಲದಂತೆ ಕೇವಲ ಮೂರು ರಂಧ್ರದ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಇದರಿಂದ ಹೆಚ್ಚು ಗಾಯವೂ ಇರುವುದಿಲ್ಲ, ಕೆಲ ದಿನಗಳಲ್ಲಿಯೇ ದಾನಿಗಳು ಸಾಮಾನ್ಯರಂತೆ ತಮ್ಮ ಕೆಲಸ ಕಾರ್ಯ ಮಾಡಬಹುದು ಎಂದು ವಿವರಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನಶಂಕರ್ ಮಾತನಾಡಿ, ಸಿಗ್ಮಾ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ಇದೆ. ಸರ್ಕಾರಿ ಯೋಜನೆಗಳು ಎಲ್ಲರಿಗೂ ದೊರೆಯುವಂತೆ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯಿಂದ ಮೊದಲು ಹಣ ಹಾಕಿ ಉಚಿತವಾಗಿ ಚಿಕಿತ್ಸೆ ಮಾಡಿ ಬಳಿಕ ಸರ್ಕಾರದಿಂದ ಆಸ್ಪತ್ರೆ ಹಣ ಪಡೆದುಕೊಳ್ಳುತ್ತದೆ ಎಂದರು.
ಆಸ್ಪತ್ರೆ ನಿರ್ದೇಶಕಿ ಹಾಗೂ ಹಿರಿಯ ಮಕ್ಕಳ ತಜ್ಞೆ ಡಾ.ರಾಜೇಶ್ವರಿ ಮಾದಪ್ಪ ಇದ್ದರು.