ಜಿಲ್ಲೆ

ಕಿಡ್ನಿ ಕಾರ್ಯ ಮರುಸ್ಥಾಪಿಸುವಲ್ಲಿ ಯಶಸ್ವಿ,  ವಿವೇಕಾನಂದ ಆಸ್ಪತ್ರೆಯಲ್ಲಿ ವೈದ್ಯರ ಸಾಧನೆ

ಹುಬ್ಬಳ್ಳಿ: ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಸಂಪೂರ್ಣ ಡಯಾಲಿಸಿಸ್ ನಲ್ಲಿದ್ದ ಸುಮಾರು 42 ವರ್ಷದ ವ್ಯಕ್ತಿಯ ಕಿಡ್ನಿ ಹರಳುಗಳನ್ನು ತೆಗೆದುಹಾಕುವ ಮೂಲಕ ರೋಗಿಗೆ ಹೊಸ ಬದುಕು ನೀಡುವಲ್ಲಿ ನಗರದ ವೈದ್ಯರು ಯಶಸ್ವಿಯಾಗಿದ್ದಾರೆ.

ಇಲ್ಲಿಯ ದೇಶಪಾಂಡೆನಗರದ ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾದ ನೆಫ್ರಾಲಜಿಸ್ಟ್ ಡಾ. ಸಿದ್ಧರಾಮ ಕಮತೆ ಹಾಗೂ ಯೂರಾಲಜಿಸ್ಟ್ ಡಾ. ಪವನ ಜೋಶಿ ಮತ್ತು ತಂಡದವರು ಈ ಸಾಧನೆ ಮಾಡಿದ್ದಾರೆ. ಈ ಇಬ್ಬರು ವೈದ್ಯರು ತಾವು ಕೈಗೊಂಡ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎರಡು ವರ್ಷದ ಹಿಂದೆ ಹಾನಗಲ್ಲದ ವ್ಯಕ್ತಿಯೊಬ್ಬರು ಕಿಡ್ನಿ ಹರಳು ಆಗಿದ್ದರಿಂದ ಸಂಪೂರ್ಣ ಜರ್ಜರಿತರಾಗಿದ್ದರು. ಆಹಾರದಲ್ಲಿ ಆಸಕ್ತಿ ಕಳೆದುಕೊಂಡು ದೌರ್ಬಲ್ಯ ಹಾಗೂ ಖಿನ್ನತೆಗೆ ಒಳಗಾಗಿದ್ದರು. ಸ್ಥಳಿಯ ವೈದ್ಯರ ಬಳಿ ತೋರಿಸಿದಾಗ ಎರಡೂ ಮೂತ್ರಪಿಂಡದಲ್ಲಿ 6ಸೆಂ.ಮೀ. ಕಲ್ಲುಗಳು ಇರುವುದು ಪತ್ತೆಯಾಗಿತ್ತು. ತೀವ್ರ ನೋವಿನಿಂದ ಕಿಡ್ನಿ ವೈಫಲ್ಯವೂ ಕಂಡು ಬಂದಿತ್ತು.

ಹೀಗಾಗಿ ಅವರಿಗೆ ಸುಮಾರು ಮೂರು ತಿಂಗಳಿಂದ ಹಿಮೋಡಯಾಲಿಸಿಸ್ ಪ್ರಾರಂಭಿಸಲಾಗಿತ್ತು. ಮಧುಮೇಹ, ರಕ್ತದೊತ್ತಡ, ರಕ್ತಹಿನತೆಯಂತಹ ಕಾಯಿಲೆಗಳೂ ಸೇರಿಕೊಂಡಿದ್ದವು.
ಇಂತಹ ಸಂದರ್ಭದಲ್ಲಿ ರೋಗಿಯು ತನ್ನ ಸ್ನೇಹಿತನ ಸಲಹೆ ಮೇರೆಗೆ ಹುಬ್ಬಳ್ಳಿಯ ನೆಫ್ರಾಲಜಿಸ್ಟ್ ಡಾ. ಸಿದ್ಧರಾಮ ಕಮತೆ ಅವರನ್ನು ಭೇಟಿ ಮಾಡಿದರು. ರಕ್ತಹಿನತೆ, ಇತರೆ ಮೆಟಾಬಾಲಿಕ್ ತೊಂದರೆಗಳ ಚಿಕಿತ್ಸೆ ಮುಂದುವರಿಸಿದ ಡಾ. ಕಮತೆ ಅವರು, ರೋಗಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದರು.

ಮೂತ್ರ ಪಿಂಡದ ಕಲ್ಲುಗಳ ಶಸ್ತ್ರಚಿಕಿತ್ಸೆಗೆ ಯೂರಾಲಜಿಸ್ಟ್ ಡಾ. ಪವನ ಜೋಶಿ ಅವರ ಸಲಹೆ ಮೇರೆಗೆ ಎಂಡೋಸ್ಕೋಪಿಕ್ (ಪಿಸಿಎನ್ಎಲ್) ಮೂಲಕ ಇಬ್ಬರು ವೈದ್ಯರು ಕಲ್ಲುಗಳನ್ನು ತೆರವುಗೊಳಿಸಿದ್ದಾರೆ.

ಇದರಿಂದ ದೊಡ್ಡ ಅಪಾಯದಿಂದ ಪಾರಾದ ರೋಗಿಗೆ ನಂತರದಲ್ಲಿ ಡಯಾಲಿಸಿಸ್ ಕೂಡ ಬಂದ್ ಮಾಡಲಾಯಿತು. ಆಸ್ಪತ್ರೆಗೆ ಬರುವಾಗ ಭರವಸೆಯನ್ನೇ ಕಳೆದುಕೊಂಡಿದ್ದ ವ್ಯಕ್ತಿ ಹಾಗೂ ಅವರ ಕುಟುಂಬದವರು ಈಗ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಎರಡು ವರ್ಷದ ಅವಲೋಕನದ ನಂತರ ರೋಗಿ ಇದೀಗ ಸಹಜ ಜೀವನ ನಡೆಸುತ್ತಿದ್ದಾರೆ ಎಂದು ಡಾ. ಪವನ ಜೋಶಿ ಹೇಳಿದರು.

ವಿವೇಕಾನಂದ ಜನರಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿ, ಐಸಿಯು ಮುಂತಾದ ಸೌಲಭ್ಯ, ನುರಿತ ಶಸ್ತ್ರಚಿಕಿತ್ಸಾ ತಂಡದ ಸಹಕಾರದೊಂದಿಗೆ ಈ ಕಾರ್ಯ ಮಾಡಲು ಸಾಧ್ಯವಾಯಿತು. ರೋಗಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಹೊಟ್ಟೆ ನೋವು, ವಾಂತಿ, ಊಟ ಸೇರದೇ ಇರುವುದು, ಉರಿಮೂತ್ರ ಇತ್ಯಾದಿ ಸಮಸ್ಯೆಗಳು ಕಿಡ್ನಿ ಹರಳು ಆದಾಗ ಕಾಣಿಸುತ್ತವೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ಹೆಚ್ಚು ನೀರು, ಮಜ್ಜಿಗೆ, ಎಳನೀರು, ದ್ರವ ಆಹಾರಗಳನ್ನು ತೆಗೆದುಕೊಳ್ಳಬೇಕು. ಮಾಂಸಾಹಾರ ಕಡಿಮೆ ಸೇವಿಸಬೇಕು ಎಂದು ಡಾ. ಕಮತೆ ಸಲಹೆ ನೀಡಿದರು.
ಡಾ. ಮಂಜುಳಾ ಹುಗ್ಗಿ ಗೋಷ್ಠಿಯಲ್ಲಿದ್ದರು.