ಕಿಕ್ಕೇರಿ: ಕರೊನಾ ಭೀತಿ ಲೆಕ್ಕಿಸದೆ ಮತ್ತು ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳದೆ ಮಂಗಳವಾರ ಹಿಂಡು ಹಿಂಡಾಗಿ ಮೀನು ಹಿಡಿಯಲು ಕೆರೆಗಿಳಿದ ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.
ಕೆ.ಆರ್.ಪೇಟೆ ತಾಲೂಕಿನಲ್ಲಿಯೇ ಬಹುದೊಡ್ಡ ಕೆರೆ ಎನಿಸಿರುವ ಮತ್ತು ವರ್ಷಪೂರ್ತಿ ತುಂಬಿರುತ್ತಿದ್ದ ಕಿಕ್ಕೇರಿಯ ಅಮಾನಿಕೆರೆಯಲ್ಲಿ ಎರಡು ವರ್ಷಗಳಿಂದ ನೀರು ಬಹುಬೇಗ ಖಾಲಿಯಾಗಿ ಮೀನುಗಳೇ ಇಲ್ಲ ಎನ್ನುವಂತಾಗಿದೆ. ಈ ನಡುವೆಯೂ ಕೆರೆಯಲ್ಲಿ ಅಳಿದುಳಿದ ಮೀನುಗಳನ್ನು ಹಿಡಿಯಲು ಗಂಗೇನಹಳ್ಳಿ, ತುರುಕರಕೊಪ್ಪಲು, ಗೋವಿಂದನಹಳ್ಳಿ, ಮಂದಗೆರೆ, ಚುಜ್ಜಲಕ್ಯಾತನಹಳ್ಳಿ, ಆನೆಗೂಳ, ಸೊಳ್ಳೇಪುರ, ಅಣೆಚಾಕನಹಳ್ಳಿ, ಕಳ್ಳನಕೆರೆ ಮತ್ತಿತರ ಗ್ರಾಮಗಳಿಂದ ದಿಢೀರನೇ ದೊಡ್ಡ ದಂಡೇ ಆಗಮಿಸಿತ್ತು. ಕೆ.ಆರ್.ಪೇಟೆ, ಹೊಸಹೊಳಲುವಿನಿಂದಲೂ ಮೀನು ಬಾಚಲು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಐನೂರಕ್ಕೂ ಹೆಚ್ಚಿನ ಜನರು ಏಕಕಾಲದಲ್ಲಿ ಕೆರೆಗೆ ಇಳಿದ ಪರಿಣಾಮ ಕೆಸರಿನ ಗದ್ದೆಯಂತಾಗಿ ಬೀಸಿದ ಬಲೆ, ಕುಳಿಗಳಿಗೆ ಮೀನು ಬಿದ್ದಿರುವುದನ್ನು ಬಾಚಿಕೊಳ್ಳಲು ಪರದಾಡಿದರು.
ಗಂಗೆಕಡದಿಂದ ಸೊಳ್ಳೇಪುರ ಗ್ರಾಮದ ದಂಡೆಗೆ ಪೊಲೀಸರು ಬರುತ್ತಿರುವುದನ್ನು ಕಂಡು ನೀರಿಗಿಳಿದವರು ಓಡಿದರು. ಮನೆಗಾಗಿ ಮೀನು ಹಿಡಿಯಲು ಬಂದ ಹಳ್ಳಿಗರು ತಾವು ಮೀನುಗಾರರು, ಮಾರಾಟಗಾರರು ಅಲ್ಲ ಎಂದು ಪೊಲೀಸರಲ್ಲಿ ಗೋಗರೆಯುತ್ತಿದ್ದರು.
ಮೀನು ಹಿಡಿಯುತ್ತಿರುವುದನ್ನು ತಿಳಿದು ಮೀನು ಖರೀದಿಸಲು ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಕೆರೆಯ ಏರಿಯ ಮೇಲೆ ಜಮಾಯಿಸಿದ್ದರು. ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ನಿಂತಿದ್ದ ಸಾರ್ವಜನಿಕರನ್ನು ಬೆದರಿಸಿ ಪೊಲೀಸರು ಚದುರಿಸಿದರು.