ಜಿಲ್ಲೆ

ಕೆದಂಬಾಡಿ ಕಪ್ ೨೦೨೩ಕ್ಕೆ ಚಾಲನೆ

reportermys

ಮಡಿಕೇರಿ: ಕ್ರೀಡೆಯೊಂದಿಗೆ ಭಾಷೆ ಮತ್ತು ಸಂಸ್ಕೃತಿಯನ್ನು ಜೋಡಿಸಬೇಕು. ಜನಾಂಗದ ಸಾಂಸ್ಕೃತಿಕ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಕೈ ಬಿಡಬಾರದು ಎಂದು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ತಜ್ಞ ಡಾ.ಕುಶ್ವಂತ್ ಕೋಳಿ ಬೈಲು ಹೇಳಿದರು.


ಭಾಗಮಂಡಲ ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆ ಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ೨೦೨೩ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಕೆದಂಬಾಡಿ ಕುಟುಂಬದ ಹಿರಿಯರ ದೂರದೃಷ್ಟಿಯ ಫಲವಾಗಿ ಸುಸಜ್ಜಿತ ಆಟದ ಮೈದಾನ ರೂಪುಗೊಂಡಿದೆ. ಚೆಟ್ಟಿಮಾನಿ ಆಟದ ಮೈದಾನವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು. ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಉತ್ತಮ ಕ್ರೀಡಾಂಗಣ ನಿರ್ಮಾಣವಾಗಬೇಕು. ಹಿಂದಿನ ಮಕ್ಕಳು ಹಾಗೂ ಯುವ ಜನರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದರು.


ಮಡಿಕೇರಿಯ ವಕೀಲ ಸಾಹಿತಿ ಹಾಗೂ ಸಂಶೋಧಕರಾದ ವಿದ್ಯಾದರ ಕುಡೆಕಲ್ಲು ಮಾತನಾಡಿ, ಕೆದಂಬಾಡಿ ರಾಮಯ್ಯಗೌಡರು ಕೇವಲ ಗೌಡ ಸಮುದಾಯದ ನಾಯಕರಲ್ಲ. ದಕ್ಷಿಣ ಭಾರತದಲ್ಲಿ ಹೆಸರು ಮಾಡಿದವರು. ಜನಾಂಗದ ಅಭಿವೃದ್ಧಿಗಾಗಿ ಅವರು ರೂಪಿಸಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.


ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿ ಕುಮಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಜಯಪ್ರಕಾಶ್, ಹಿರಿಯ ಅಂತರಾಷ್ಟ್ರೀಯ ಅಥ್ಲೆಟಿಕ್ ಸೂದನ ಡಾಲಿ, ಕೆದಂಬಾಡಿ ನಿತಿನ್, ಶ್ರಾವ್ಯ ಸೇರಿದಂತೆ ಕೆದಂಬಾಡಿ ಕುಟುಂಬಸ್ಥರು ಹಾಗೂ ಕೆದಂಬಾಡಿ ಕ್ರಿಕೆಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.