ಜಿಲ್ಲೆ

ಹೇಮೆ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆಯಲ್ಲಿ ಕಿಕ್​ ಬ್ಯಾಕ್​ !

ಗಂಗಾಧರ ಬಿ ವಿ

* ಮಾಜಿ ಶಾಸಕ ಎ.ಮಂಜುನಾಥ್​ ಆರೋಪ

ಮಾಗಡಿ

ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆಯ 990 ಕೋಟಿ ರೂ. ನಲ್ಲಿ 300 ಕೋಟಿ ರೂ.ಕಿಕ್​ ಬ್ಯಾಕ್​ ಆಗಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್​ ಆರೋಪಿಸಿದರು.

ಪಟ್ಟಣದ ಜೆಡಿಎಸ್​ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಕ್ಸ್​ಪ್ರೆಸ್​ ಕೆನಾಲ್​ ಬರಬೇಕು ಎಂದು ಕುಣಿಗಲ್​ ಶಾಸಕ ರಂಗನಾಥ್​, ಎಚ್​.ಸಿ.ಬಾಲಕೃಷ್ಣ ರೈಲು ಬಿಡುತ್ತಿದ್ದಾರೆ. ಈ ಯೋಜನೆಗೆ ಜೆಡಿಎಸ್​ ವಿರೋಧ ಎನ್ನುತ್ತಿದ್ದರು. ಈಗ ಕಾಂಗ್ರೆಸ್​ನವರು ವಿರೋಧ ಮಾಡುತ್ತಿದ್ದಾರೆ. ಅವರ ಸರ್ಕಾರ ಇದ್ದರೂ ಮಾಗಡಿಗೆ ನೀರು ತರಲು ಶಕ್ತಿ ಇಲ್ಲವೆ?, ಸಿಎಂ ಕಾರ್ಯಕ್ರಮದಲ್ಲಿ ಈ ಯೋಜನೆಗೆ ವಿರೋಧ ಮಾಡಬಾರದು ಎಂದು ರಾಜಣ್ಣ ಅವರಿಗೆ ಶಾಸಕ ಬಾಲಕೃಷ್ಣ ಹೇಳಿದರು. ಆದರೆ, ಸಚಿವರು ತುಟಿಬಿಚ್ಚಿಲ್ಲ ಏಕೆ ಎಂದು ಪ್ರಶ್ನಿಸಿದರು.

ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಶಾಸಕರು ಶೇ.10 ತರಲಿ, ಅವರು ಅಧ್ಯಕ್ಷರಾಗಿರುವ ನಿಗಮ ಮಂಡಳಿಯಿಂದ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ಬಹಿರಂಗಗೊಳಿಸಲಿ, ಮಂಚನಬೆಲೆ ಬ್ರಿಜ್​ ಯೋಜನೆ ಮಂಜೂರು ಮಾಡಿಸಿಲ್ಲ, ನಾನು ತಂದ 70 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಿಎಂ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದಾರೆ. ಎಚ್​.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ 1750 ಕೋಟಿ ರೂ. ವೆಚ್ಚದ ಕೆಶಿಫ್​ ರಸ್ತೆ, ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸುವ, ಬಿಡದಿ ಒಳಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಬೊಮ್ಮಾಯಿ ಸಿಎಂ ಆದ ವೇಳೆ ಜಿಟಿಡಿಸಿ ಕೇಂದ್ರ, ಸಂಸತ ವಿಶ್ವವಿದ್ಯಾಲಯ ಸೇರಿ ಹಲವು ಯೋಜನೆಗಳನ್ನು ನನ್ನ ಅವಧಿಯಲ್ಲಿ 960 ಕೋಟಿ ರೂ. ತಂದಿದ್ದೇನೆ ಎಂದರು.

ಮುನಿರತ್ನ ವಿಚಾರದಲ್ಲಿ ಮಾಗಡಿ ಮಾಜಿ ಶಾಸಕರ ಹೆಸರು ತಳುಕು ಎಂಬ ಪ್ರಶ್ನೆಗೆ, ತಾಲೂಕಿನಲ್ಲಿ ಮಾಜಿ ಶಾಸಕರು ಎಷ್ಟೋ ಜನ ಇದ್ದಾರೆ, ಆ ವಿಚಾರ ನಮಗೆ ಏಕೆ. ಸಾವಿರಾರು ಜನ ಹೇಳಿಕೊಳ್ಳಲಿ ಎಂದಷ್ಟೇ ಉತ್ತರಿಸಿದರು.

ಪುರಸಭೆ ಸದಸ್ಯರಾದ ಎಂ.ಎನ್​.ಮಂಜುನಾಥ್​, ರೇಖಾ, ವಿಜಯಾ, ಅಶ್ವತ್ಥ್​, ನಾಗರತ್ನಮ್ಮ, ಅನಿಲ್​ ಕುಮಾರ್​, ಮುಖಂಡರಾದ ವಿ.ಜಿ. ಕೆಂಪೇಗೌಡ, ರಾಮಣ್ಣ ಇತರರು ಇದ್ದರು.

ವಸೂಲಿ

ಇಂಜಿನಿಯರ್​ ಕಾಲೇಜು, ಕೈಗಾರಿಕಾ ಪ್ರದೇಶ ತರಲಿ, ಪಟ್ಟಣದಲ್ಲಿ ಕಸ ಎತ್ತುವವರಿಲ್ಲ, ಸರ್ಕಾರಿ ಬಸ್​ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲ, ತಾಲೂಕು ಕಚೇರಿಯಲ್ಲಿ ಕೆಲಸವಾಗುತ್ತಿಲ್ಲ, ಸಮರ್ಪಕ ಕುಡಿವ ನೀರಿಲ್ಲ. ಈ ಬಗ್ಗೆ ಶಾಸಕರು ಗಮನಹರಿಸದೆ ಬಡವರ ಆಸ್ತಿ ಹೊಡೆಯುತ್ತಾ, ಹಾಲಿನ ಡೇರಿ, ವಿಎಸ್​ಎಸ್​ಎನ್​, ಇನ್​ಸ್ಪೆಕ್ಟರ್​, ತಹಸೀಲ್ದಾರ್​ಗಳಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಎ.ಮಂಜುನಾಥ್​ ದೂರಿದರು.