ಜಿಲ್ಲೆ

ಜಪ್ತಿ ನೋಟಿಸ್‌ಗೆ ಹೆದರಿ ಹಣ ಠೇವಣಿ ಇಟ್ಟ ಕೆಐಎಡಿಬಿ

ಬೆಂಗಳೂರು: ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ವಿತರಿಸದೆ ಅನಗತ್ಯ ವಿಳಂಬ ಮಾಡಿದ್ದ ಕೆಐಎಡಿಬಿ ಧೋರಣೆ ಖಂಡಿಸಿ ರೈತರು ರವಾನಿಸಿದ್ದ ಜಪ್ತಿ ನೋಟಿಸ್‌ಗೆ ಹೆದರಿ ಸಂಸ್ಥೆಯು ನ್ಯಾಯಾಲಯದಲ್ಲಿ ಹಣ ಠೇವಣಿ ಇಟ್ಟಿದೆ.

ರಾಮನಗರ ಜಿಲ್ಲೆಯ ಬಿಡದಿಯ ಟಯೋಟಾ ಕಂಪನಿಗೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಿಡಿಸಿದ್ದ ಕೆಐಎಡಿಬಿ, ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಪರಿಹಾರದ ಹಣ ನೀಡಿರಲಿಲ್ಲ. ಈ ವಿಷಯವಾಗಿ ರೈತರು ಸ್ಥಳೀಯ ಜೆಎಂಸಿ ಕೋರ್ಟ್, ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ನ್ಯಾಯ ಕೋರಿದ್ದರು. ಈ ಎಲ್ಲ ನ್ಯಾಯಾಲಯಗಳು ರೈತರಿಗೆ ಪರಿಹಾರ ವಿತರಿಸುವಂತೆ ಆದೇಶಿಸಿದ್ದರೂ, ಸಂಸ್ಥೆ ಮಾತ್ರ ಮುಗುಂ ಆಗಿಯೇ ವರ್ತಿಸುತ್ತಿತ್ತು. ಇದರಿಂದ ಬೇಸತ್ತ ರೈತರು, ಶುಕ್ರವಾರ ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಆವರಣದಲ್ಲಿರುವ ಕೆಐಎಡಿಬಿ ಕಚೇರಿಯನ್ನು ಜಪ್ತಿ ಮಾಡಲು ಕೋರ್ಟ್ ಅಮಿನ್ ನಾಗರಾಜ್ ಅವರೊಂದಿಗೆ ಆಗಮಿಸಿದ್ದರು.

ಆದರೆ, ಜಪ್ತಿಯಿಂದ ತಪ್ಪಿಸಿಕೊಳ್ಳಲು ಕೆಲ ದಿನಗಳ ಹಿಂದೆಯಷ್ಟೇ ರಾಮನಗರ ಜೆಎಂಸಿ ಕೋರ್ಟ್‌ನಲ್ಲಿ ಪರಿಹಾರದ ಹಣದಲ್ಲಿ ಶೇ.50 ಭಾಗವಾದ 18.45 ಕೋಟಿ ರೂ. ಜಮೆ ಮಾಡಿದೆ. ಉಳಿದ ಮೊತ್ತವನ್ನು ನಂತರದಲ್ಲಿ ವಿತರಿಸುವುದಾಗಿ ಅಮಿನ್‌ಗೆ ಮಾಹಿತಿ ನೀಡಲಾಯಿತು. ಇದರಿಂದಾಗಿ ಸಂಸ್ಥೆಯ ಪೀಠೋಪಕರಣ ಹಾಗೂ ಇನ್ನಿತರ ಸಾಮಗ್ರಿ ಜಪ್ತಿ ವಿಚಾರವನ್ನು ಕೈಬಿಟ್ಟು ಬಾಕಿ ಮೊತ್ತವನ್ನು ಬೇಗನೆ ಪಾವತಿಸುವಂತೆ ಸೂಚಿಸಲಾಯಿತು.

ಮುಂದಿನ ತಿಂಗಳ ಮಾ.1ರಂದು ವಿಚಾರಣೆ ಇದ್ದು, ಆ ವೇಳೆಗೆ ಪರಿಹಾರ ವಿತರಿಸುವ ಭರವಸೆ ನೀಡಲಾಗಿದೆ. 1997-98ರಿಂದಲೂ ಸ್ವಾಧೀನ ಪಡಿಸಿಕೊಂಡಿದ್ದ ಖರಾಬು ಜಮೀನಿಗೆ ಮಾತ್ರ ಪರಿಹಾರ ನೀಡದೆ ಸಂಸ್ಥೆಯು ವಿವಿಧ ಕೋರ್ಟ್‌ಗಳಲ್ಲಿ ವಾದ ಮಂಡಿಸುತ್ತಿತ್ತು. ಎಲ್ಲ ನ್ಯಾಯಾಲಯಗಳು ಭೂಮಾಲೀಕರ ಪರವಾಗಿ ಆದೇಶ ಮಾಡಿದ್ದರೂ, ಪರಿಹಾರ ನೀಡಿರಲಿಲ್ಲ. ವಿಳಂಬ ಮಾಡಿದ್ದಕ್ಕೆ ಶೇ.15 ಬಡ್ಡಿಯಂತೆ ಪರಿಹಾರ ವಿತರಿಸಲು ಕೋರ್ಟ್ ಸೂಚಿಸಿದೆ ಎಂದು ರೈತರಾದ ಗಿರೀಶ್ ಹಾಗೂ ಪರಮೇಶ್ ತಿಳಿಸಿದ್ದಾರೆ.

ದಂಡಕ್ಕೂ ಜಗ್ಗದ ಕೆಐಎಡಿಬಿ:

ನಿಯಮಾನುಸಾರ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಬೇಕು. ಆದರೆ, ಕೆಐಎಡಿಬಿ ಬಿಡದಿ ಬಳಿ ವಶಪಡಿಸಿಕೊಂಡಿದ್ದ ಜಮೀನಿನ ಖರಾಬು ಭಾಗಕ್ಕೆ ತಾಂತ್ರಿಕ ನೆಪವೊಡ್ಡಿ ಪರಿಹಾರ ನೀಡಲು ಹಿಂದೇಟು ಹಾಕಿತ್ತು. ಪ್ರಕರಣ ರಾಮನಗರ ಜೆಎಂಸಿ ಕೋರ್ಟ್, ಹೈಕೋರ್ಟ್ ಆದೇಶ ರೈತರ ಪರವಾಗಿ ಬಂದರೂ, ಪರಿಹಾರ ನೀಡದಿದ್ದಕ್ಕೆ ದಂಡ ಹಾಕಿಸಿಕೊಂಡಿದೆ. ಸುಪ್ರೀಂಕೋರ್ಟ್‌ನಿಂದಲೂ ತರಾಟೆಗೆ ಒಳಗಾಗಿದ್ದ ಸಂಸ್ಥೆಯು ಈವರೆಗೂ ಪೂರ್ಣ ಮೊತ್ತವನ್ನು ರೈತರಿಗೆ ಪಾವತಿಸಿಲ್ಲ.