ಬೆಂಗಳೂರು: ಜೀವನದಲ್ಲಿ ಸಂತಸದಿಂದ ಇರಲು ಬೇಕಾಗುವ ಕಾರಣಗಳನ್ನು ನಾವೇ ಹುಡುಕಿಕೊಳ್ಳಬೇಕು ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದ್ದಾರೆ.
ಸಂಗೀತಧಾಮ ಟ್ರಸ್ಟ್ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶೈಲೇಶ್ ಪಟವರ್ಧನ್ ರಚಿಸಿದ "ಖುಷಿಪಡಲು ಕಾರಣ' ಕವನ ಸಂಕಲನ ಹಾಗೂ ಮೃತ್ಯುಂಜಯ ದೊಡ್ಡವಾಡ ಸಂಗೀತ ನಿರ್ದೇಶನದ 47ನೇ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು, ದ.ರಾ. ಬೇಂದ್ರೆ ಅವರು ಗೇಯ ಗೀತೆ ಬರೆಯುತ್ತಿದ್ದರು. ಅವರು ಛಂದೋಬದ್ಧವಾಗಿ ಇದ್ದುದರಿಂದ ಹಾಡಲು ಅನುಕೂಲಕರವಾಗಿತ್ತು. ಆಕಾಶವಾಣಿ ಮೂಲಕ ಈ ಹಾಡುಗಳು ಜನರಿಗೆ ತಲುಪಲು ಆರಂಭವಾಯಿತು. ಆಕಾಶವಾಣಿ ನಂತರ ಕ್ಯಾಸೆಟ್ಗಳ ಮುನ್ನೆಲೆಗೆ ಬಂತು. "ನಿತ್ಯೋತ್ಸವ' ಮೊದಲ ಕ್ಯಾಸೆಟ್ ಆಗಿದ್ದು, ಇದು ಬಿಡುಗಡೆಯಾದ ಬಳಿಕ ಭಾವಗೀತೆಯ ಸ್ವರೂಪ ಬದಲಾಯಿತು. ಅಲ್ಲಿಯವರೆಗೆ ಕವಿಗಳು ಬರೆದ ಗೀತೆಗಳಿಗೆ ರಾಗ ಸಂಯೋಜನೆ ಮಾಡಲಾಗುತ್ತಿತ್ತು, ಇದೆಲ್ಲವೂ ಕವನ ಸಂಕಲನಗಳೇ ಆಗಿದ್ದವು. ನಿತ್ಯೋತ್ಸವದಲ್ಲಿ ಹಾಡಲೆಂದೇ ಕವಿತೆಗಳನ್ನು ಬರೆಯಲಾಗಿತ್ತು. ಕವಿಗಳೇ ಇದನ್ನು ಬರೆಯುತ್ತಿದ್ದುದರಿಂದ ಕಾವ್ಯದ ಸತ್ವ ಇರುತ್ತಿತ್ತು. ಪ್ರಸ್ತುತ ಕ್ಯಾಸೆಟ್, ಸಿ.ಡಿ. ಕಾಲ ಅಂತ್ಯವಾಗಿದೆ. ಆಲ್ಬಂ ಹಾಡು ಇಂದಿನ ಟ್ರೆಂಡ್ ಆಗಿದ್ದು, ಇದು ಲಾಭದಾಯಕ ಉದ್ಯಮ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ದೂರದರ್ಶನದ ಬೆಂಗಳೂರು ವಿಭಾಗದ ನಿರ್ದೇಶಕಿ ಡಾ.ನಿರ್ಮಲಾ ಎಲಿಗಾರ್ ಮಾತನಾಡಿ, ಉಸಿರು ನಿಲ್ಲುವತನಕದ ಬದುಕಿನ ಬವಣೆಯನ್ನು "ಖುಷಿ ಪಡಲು ಕಾರಣ' ಗೀತ ದೃಶ್ಯ ಸುಂದರವಾಗಿ ಕಟ್ಟಿಕೊಟ್ಟಿದೆ. 15 ವರ್ಷಗಳ ಹಿಂದೆ ದೂರದರ್ಶನದಲ್ಲಿ ಆಲ್ಬಂ ಹಾಡುಗಳನ್ನು ಕಾರ್ಯಕ್ರಮದ ಮಧ್ಯದಲ್ಲಿ ಫಿಲ್ಲರ್ಗಳಾಗಿ ಪ್ರಸಾರ ಮಾಡಲಾಗುತ್ತಿತ್ತು. ಅಂದಿಗೆ ವಿನೂತನವಾಗಿದ್ದ ಈ ಪ್ರಯತ್ನ ಯಶಸ್ವಿಯಾಗಿತ್ತು ಎಂದು ತಿಳಿಸಿದರು.
ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಗೋಪಾಲ್ ನಾಯಕ್, ನ್ಯಾಷನಲ್ ಎಜುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ, ಪಿಇಎಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪಿ.ಎಲ್. ನಂದಾ ಮತ್ತಿತರರಿದ್ದರು.