ವಿಜಯಪುರ ಜೋರಾಪುರ ಪೇಟದಲ್ಲಿ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 
ಜಿಲ್ಲೆ

ಜೋರಾಪುರ ಪೇಟದಲ್ಲಿ ಖಾಲಿ ಕೊಡ ಪ್ರದರ್ಶನ

ವಿಜಯಪುರ: ಕುಡಿಯುವ ನೀರಿಗಾಗಿ ಆಗ್ರಹಿಸಿ ನಗರದ ಜೋರಾಪುರ ಪೇಟದಲ್ಲಿ ಮಹಿಳೆಯರು ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ರಸ್ತೆ ತಡೆದು, ಖಾಲಿ ಕೊಡ ಪ್ರದರ್ಶಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಗ್ಗೆ ಏಕಾಏಕಿ ಬೀದಿಗಿಳಿದ ಮಹಿಳೆಯರು ಮಹಾನಗರ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಕುಡಿಯುವ ನೀರು ಪೂರೈಸದ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಟೀಕೆಗಳ ಸುರಿಮಳೆಗೈದರು.

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದ ದೈನಂದಿನ ಜೀವನ ನಡೆಸಲು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಮುಂದಾದ ಗಾಂಧಿ ಚೌಕ್ ಪಿಎಸ್‌ಐ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಸಕಾಲಕ್ಕೆ ಸಮರ್ಪಕವಾಗಿ ನೀರು ಬಿಡುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.