ಎ.ಪಿ. ಮಠಪತಿ ಕಮಲನಗರ
ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ್ಯ. ಆದರೆ ಕಮಲನಗರ ತಾಲೂಕಿನ ಖೇಡ್ ಗ್ರಾಮದಲ್ಲಿ ಮಂಗಳವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವದಗಿಯ ರೇವಪ್ಪಯ್ಯ ಸ್ವಾಮೀಜಿ ಗುರುಪೂಜೆ ನಿಮಿತ್ತ ಹೋಳಿಗೆ-ತುಪ್ಪದ್ದೇ ಜಾತ್ರೆ ನಡೆಯುವುದು ಬಲು ವಿಶೇಷ.
೧೯ ವರ್ಷಗಳಿಂದ ಕಾರಹುಣ್ಣಿಮೆಯ ಆರನೇ ದಿನಕ್ಕೆ ಖೇಡ್‌ನಲ್ಲಿ ಈ ದಾಸೋಹ ಅಂಗವಾಗಿ ಹೋಳಿಗೆ-ತುಪ್ಪದ ಜಾತ್ರೆ ನಡೆದುಕೊಂಡು ಬಂದಿದೆ. ಕರ್ನಾಟಕವಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಬರುವ ಸಹಸ್ರಾರು ಭಕ್ತರಿಗೆ ಬೆಳಗ್ಗೆಯಿಂದ ಇಳಿಹೊತ್ತಿನವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಪಡಿಸುತ್ತಾರೆ ಖೇಡ್ ಗ್ರಾಮಸ್ಥರು.
ದಾಸೋಹಕ್ಕೆ ಹೈದರಾಬಾದ್‌ನಿಂದ ೧೫ ಕೆಜಿಯ ೬೦ ಡಬ್ಬಿ ತುಪ್ಪ ಅಂದರೆ ೬೭೫ ಕೆಜಿ ಹಾಗೂ ೭೦೦ ಕೆಜಿ ಕಡಲೆ ಬೇಳೆ, ೭೦೦ ಕೆಜಿ ಸಕ್ಕರೆ ಹಾಗೂ ೨೦ ಕ್ವಿಂಟಾಲ್ ಅಕ್ಕಿ, ೧.೫ ಕ್ವಿಂಟಾಲ್ ಉಪ್ಪಿನಕಾಯಿ, ೭೦೦ ಕ್ವಿಂಟಾಲ್ ಗೋಧಿ ತಂದಿದ್ದೇವೆ. ರೇವಪ್ಪಯ್ಯ ಸ್ವಾಮೀಜಿ ಮೇಲಿರುವ ಭಕ್ತಿಯಿಂದ ಭಕ್ತರು ಗ್ರಾಮದೆಡೆಗೆ ಧಾವಿಸಿ ಪ್ರಸಾದ ಸೇವಿಸುತ್ತಿದ್ದಾರೆ ಎಂದು ಗ್ರಾಮಸ್ಥ ಧನರಾಜ ದಾನಾ ತಿಳಿಸಿದರು.
ಖೇಡ್‌ನಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಂಡು ಹೋದ ಹೆಣ್ಮಕ್ಕಳು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೆ ಈ ಜಾತ್ರೆಗೆ ಬಂದಿದ್ದರಿಂದ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸುಮಾರು ೩೦ ಸಾವಿರ ಭಕ್ತಾದಿಗಳು ಸೇರಿದ್ದರು. ಎಲ್ಲೆಂದರಲ್ಲಿ ಜನಸಾಗರ, ಸಂಗಮದಿಂದ ಖೇಡ್ ರಸ್ತೆಯುದ್ದಕ್ಕೂ ಜೀಪ್, ಟಂಟಂ, ಟೆಂಪೋ, ಮೋಟಾರ್ ಸೈಕಲ್, ಕಾರುಗಳ ಸಂಚಾರ ವ್ಯಾಪಕವಾಗಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಹರಸಾಹಸ ಪಟ್ಟು ಟ್ರಾಫಿಕ್ ಕ್ಲೀಯರ್ ಮಾಡಲು ಶ್ರಮಿಸುತ್ತಿರುವುದು ಕಂಡು ಬಂತು.
ಜಾತ್ರೆಯಲ್ಲಿ ವಿಭೂತಿ, ರುದ್ರಾಕ್ಷಿ, ತೆಂಗು ಹಾಗೂ ಮಕ್ಕಳ ಆಟಿಕೆಗಳ ಅಂಗಡಿಗಳು ಜನರಿಂದ ತುಂಬಿದ್ದವು. ಜಾತ್ರೆಗೂ ಮೊದಲು ಐದು ದಿನ ತಡೋಳಾ-ಮೆಹಕರ್ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಗ್ರಾಮಸ್ಥರಿಗೆ ಬೆಳಗ್ಗೆ ಇಷ್ಟಲಿಂಗ ಪೂಜೆ, ಜಪ, ಧ್ಯಾನದ ಕುರಿತು ಪ್ರಶಿಕ್ಷಣ ಮತ್ತು ಸಂಜೆ ಪ್ರವಚನ ನೀಡಿದ್ದಾರೆ.
ಮಹಾತಪಸ್ವಿ ರೇವಪ್ಪಯ್ಯ ಸ್ವಾಮಿ ಅವರ ದಾಸೋಹ ಕಾರ್ಯವನ್ನು ೧೯ ವರ್ಷಗಳಿಂದ ಖೇಡ್ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷ.
ರೇವಪ್ಪಯ್ಯ ಭವ್ಯ ಪ್ರತಿಮೆ ಪ್ರತಿಷ್ಠಾಪನೆ: ಭಾಲ್ಕಿ ತಾಲೂಕಿನ ನಾವದಗಿಯ ರೇವಪ್ಪಯ್ಯ ಸ್ವಾಮಿ ಖೇಡ್‌ನಲ್ಲಿ ತಪಸ್ಸು ಮಾಡಿದ್ದರು. ಅದೇ ಸ್ಥಳದಲ್ಲಿ ಗ್ರಾಮಸ್ಥರು ಅವರ ಭವ್ಯ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ನಾವದಗಿ ರೇವಪ್ಪಯ್ಯ ತಮ್ಮ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆಯ ಸಂಸ್ಕಾರ ನೀಡುತ್ತ ಹಳ್ಳಿ-ಹಳ್ಳಿಗಳಲ್ಲಿ ಹೋಳಿಗೆ-ತುಪ್ಪದ ದಾಸೋಹ ಮಾಡಿಸುತ್ತಿದ್ದರು. ಒಂದ್ಸಲ ಪೂಜ್ಯರ ಸಮ್ಮುಖದಲ್ಲಿ ಈ ಬಿನ್ನಹ ಜಾತ್ರೆಗೆ ತುಪ್ಪ ಕಡಿಮೆ ಬಿದ್ದಾಗ ಅಲ್ಲಿಯೇ ಇದ್ದ ತೆರೆದ ಬಾವಿ ನೀರನ್ನು ತುಪ್ಪವಾಗಿ ಪರಿವರ್ತಿಸಿ ಭಕ್ತರಿಗೆ ಉಣಬಡಿಸಿದ್ದರು ಎಂಬ ಪ್ರತೀತಿ ಇದೆ. ಹೀಗಾಗಿ ಪೂಜ್ಯರ ಈ ಪವಾಡದಿಂದ ಜಾತ್ರೆಯಲ್ಲಿ ಹೋಳಿಗೆ-ತುಪ್ಪ ಊಟದ ಪರಂಪರೆ ಮುಂದುವರಿದಿದೆ. ಅಲ್ಲದೆ ಈ ಜಾತ್ರೆಯಲ್ಲಿ ಊಟ ಮಾಡಿದವರಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ಮಾತಿದೆ. ಹೀಗಾಗಿ ಸಾವಿರಾರು ಭಕ್ತರು ಈ ಜಾತ್ರೆಗೆ ಆಗಮಿಸಿ ಹೋಳಿಗೆ ತುಪ್ಪದ ಪ್ರಸಾದ ಸ್ವೀಕರಿಸುತ್ತಾರೆ.
ಈ ಜಾತ್ರೆಯಲ್ಲಿ ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಳ್ಳುತ್ತಾರೆ. ಗ್ರಾಮೀಣ ಭಾಗದ ಸಂಸ್ಕೃತಿ ಪ್ರತೀಕವೇ ಹೋಳಿಗೆ-ತುಪ್ಪದ ಜಾತ್ರೆ. ರೇವಪ್ಪಯ್ಯ ಸ್ವಾಮಿ ಭಕ್ತರು ಕಾಯಕ ಮತ್ತು ದಾಸೋಹವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹೋಗಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿರಲಿದೆ.
| ಪ್ರಭು ಚವ್ಹಾಣ್ ಶಾಸಕ
ರೇವಪ್ಪಯ್ಯ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿ ಕೈಗೊಂಡ ಹೋಳಿಗೆ ತುಪ್ಪದ ದಾಸೋಹ ಕಾರ್ಯವನ್ನು ಖೇಡ್ ಗ್ರಾಮಸ್ಥರು ಇಲ್ಲಿಯವರೆಗೂ ಶ್ರದ್ಧಾ ಭಕ್ತಿಯಿಂದ ಮುಂದುವರಿಸಿದ್ದಾರೆ. ಈ ಕಾರ್ಯದಲ್ಲಿ ಎಲ್ಲರೂ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡು ಭಕ್ತಿ ಸೇವೆ ಮಾಡುತ್ತಾರೆ.
| ಮಲ್ಲಪ್ಪ ದಾನಾ ಖೇಡ್ ಗ್ರಾಮಸ್ಥ
ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವುದೇ ಈ ಜಾತ್ರೋತ್ಸವ. ಇಂಥ ಉತ್ಸವಗಳು ರಾಷ್ಟ್ರೀಯ ಭಾವೈಕ್ಯ ಸಾರುವ ರಾಜಮಾರ್ಗಗಳು. ಸ್ವಾವಲಂಬನೆ, ಸ್ವಯಂಸೇವೆ, ಸಮರ್ಪಣಾ ಭಾವ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಸನ್ನಿವೇಶದಲ್ಲಿ ಸಂಸ್ಕಾರಪ್ರಧಾನ ಕಾರ್ಯಕ್ರಮಗಳ ಅಗತ್ಯವಿದೆ. ಜತೆಗೆ ಪ್ರಕೃತಿ, ಗೋಮಾತೆ ಹಾಗೂ ಭಾರತ ಮಾತೆಯನ್ನು ಸಂರಕ್ಷಿಸುವ ಕಾರ್ಯ ಹೆಚ್ಚಬೇಕು.
| ಶ್ರೀ ರಾಜೇಶ್ವರ ಶಿವಾಚಾರ್ಯ ಕಟ್ಟಿಮನಿ ಸಂಸ್ಥಾನ ಮಠಾಧ್ಯಕ್ಷರು, ಮೆಹಕರ್-ತಡೋಳಾ ಮಠ