ಜಿಲ್ಲೆ

ಕಾವಿ ಕಲೆಯ ಪ್ರಯೋಗಾತ್ಮಕ ಪ್ರದರ್ಶನ ಉದ್ಘಾಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕರ್ನಾಟಕವು ಹಲವು ಕಲೆಗಳ ತವರೂರು, ಇಲ್ಲಿನ ಕರಾವಳಿ ಭಾಗದ ಅತ್ಯದ್ಭುತವಾದ ಈ ಕಲೆಯು ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಅತಿ ಪ್ರಾಚೀನ ಕಲೆಯಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕೆಲಸ ಶ್ಲಾಘನೀಯ ಎಂದು ಚಿತ್ರಕಲಾ ಮಂದಿರ ಕಲಾಶಾಲೆಯ ಉಪನ್ಯಾಸಕಿ ವಿಜಯಲಕ್ಷ್ಮಿ ಎನ್. ಹೇಳಿದರು.

ಶನಿವಾರ ಕಾವಿ ಆರ್ಟ್ ಪೌಂಡೇಶನ್ ಹಾಗೂ ಭಾವನಾ ಫೌಂಡೇಶನ್ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ “ಕಾವಿ ಕಲೆ’ಯ ವಿಭಿನ್ನವಾದ ಪ್ರಯೋಗಾತ್ಮಕ ಕಲಾ ಪ್ರದರ್ಶನವನ್ನು  ಹತ್ತು ಮೂರು ಇಪ್ಪತ್ತೆಂಟು ಬಡಗುಪೇಟೆ ಗ್ಯಾಲರಿಯಲ್ಲಿ  ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿಗಳಾದ ಆನಂದ ಕಾರ್ನಾಡ್‌ ಮಾತನಾಡಿ, “ ಕೊಂಕಣ ಕಲೆಗೆ ಬಹಳಷ್ಟು ಪ್ರಾಚೀನತೆ ಇದ್ದರೂ ಪ್ರಾಧಾನ್ಯತೆ ದೊರಕದಿರುವುದು ಬಹಳ ಖೇದಕರ ಸಂಗತಿ. ಬಹಳಷ್ಟು ಶೀಘ್ರದಲ್ಲಿ ಈ ಪಾರಂಪರಿಕ ಕಲೆಗೆ ಜಿ. ಐ. ಮಾನ್ಯತೆ ದೊರಕಲಿ, ಕಲಾವಿದರನ್ನು ಪೋಷಿಸುವ ಗುಣ ಹೆಚ್ಚಾಗಲಿ ಎಂದರು.

ಫೌಂಡೇಶನ್‌ನ ನಿರ್ದೇಶಕ ಹಾವಂಜೆ ಮಂಜುನಾಥ ರಾವ್‌ ಮಾತನಾಡಿದರು. ಉಡುಪಿ, ಉತ್ತರ ಕನ್ನಡ ಹಾಗೂ ಮಂಗಳೂರು ಭಾಗದ ೧೮ ಕಲಾವಿದರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾದಲ್ಲಿ ಕಾವಿ ಕಲೆಯ ಅಧೀಕೃತ ಮಾರಾಟವನ್ನು ಬಿಡುಗಡೆ ಮಾಡಲಾಯಿತು. ಕಲಾ ಪ್ರದರ್ಶನದಲ್ಲಿ ಶ್ರೀನಿವಾಸ ಆಚಾರ್, ರಮೇಶ್ ಅಂಬಾಡಿ, ಸಿರ್ಸಿಯ ರಾಜೇಶ್ ಶಿರ್ಸೀಕರ್, ವರ್ಷಾ ಎ.ಜೆ., ಆಶ್ಲೇಷ್ ಭಟ್, ವಿಕ್ರಮ್ ಸುವರ್ಣ, ನಯನಾ ಆಚಾರ್ಯ, ಕೀರ್ತಿ ಕುಮಾರ್, ಪುರಂದರ್ ಮಲ್ಪೆ, ಸೌಮ್ಯಾ ಆಚಾರ್ಯ, ರಾಘವೇಂದ್ರ ಕಲ್ಕೂರ, ಮಂಗಳೂರಿನ ಪುಷ್ಪಾಂಜಲಿ ರಾವ್, ಪುರಂದರ ಆಚಾರ್ಯ, ಬೇಬಿ ಎಂ. ರಾವ್, ಮಂಜುನಾಥ ರಾವ್, ಅಕ್ಷತಾ ವಿಶು ರಾವ್, ಸಂತೋಷ್ ಪೈ ಹಾಗೂ ಜನಾರ್ದನ ಹಾವಂಜೆಯವರ ಗಣೇಶ, ಸರಸ್ವತಿ, ಟ್ರೀ ಆಫ್ ಲೈಫ್, ಶ್ರೀ ರಾಮ, ಕೃಷ್ಣ, ಕೊರಗಜ್ಜ, ಮಂಡಲ ವಿನ್ಯಾಸಗಳು ಮುಂತಾಗಿ ಸುಮಾರು ೩೦ ಕಲಾಕೃತಿಗಳು ಪ್ರದರ್ಶನದಲ್ಲಿದೆ.