ಜಿಲ್ಲೆ

ಖಾತ್ರಿ ಕಾಮಗಾರಿ 150 ದಿನಕ್ಕೆ ಹೆಚ್ಚಿಸಿ

ಸಿಂಧನೂರು: ತಾಲೂಕನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಅಗತ್ಯ ಪರಿಹಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ತುರ್ವಿಹಾಳ ನಾಡ ತಹಸೀಲ್ದಾರ್ ಮರೇಗೌಡಗೆ ಸಿಪಿಐಎಂ ಮಂಗಳವಾರ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿರುವುದರಿಂದ ಬರಗಾಲ ಆವರಿಸಿದೆ. ಇದರಿಂದಾಗಿ ಜನ-ಜಾನುವಾರು ತೀವ್ರ ಸಂಕಷ್ಟ ಎದುರಿಸುತ್ತಿವೆ. ಬರ ಪೀಡಿತ ತಾಲೂಕುಗಳಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಕೆಲಸವನ್ನು ಪ್ರತಿ ಕುಟುಂಬಕ್ಕೆ 150 ದಿನ ಕಡ್ಡಾಯವಾಗಿ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ನಷ್ಟವಾಗಿರುವ ಬೆಳೆಗೆ ವಿಮೆ ಪರಿಹಾರ ಕಲ್ಪಿಸಬೇಕು. ಬಡ ರೈತರ, ಕೂಲಿಕಾರರ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಬರಗಾಲ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಮನ್ನಾ ಮಾಡಬೇಕು. ಆಹಾರ ಧಾನ್ಯಗಳು ಕೃತಕ ಅಭಾವ ಸೃಷ್ಟಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ಕಾಳಸಂತೆಕೋರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.