ಜಿಲ್ಲೆ

ಖಾತಾ ಆಂದೋಲನಕ್ಕೆ ಏಕಪಕ್ಷೀಯ ತೀರ್ಮಾನ

ಎನ್.ವೆಂಕಟೇಶ್

ಅಧ್ಯಕ್ಷರ ನಡೆಗೆ ಸದಸ್ಯರ ಅಸಮಾಧಾನ ಸಂಬಂಧಪಡದವರಿಂದ ಪ್ರಚಾರ, ಪ್ರತ್ಯೇಕ ಕರಪತ್ರ ಹಂಚಿಕೆ

ಚಿಕ್ಕಬಳ್ಳಾಪುರ: ಒಂದೇ ಬಡಾವಣೆಯಲ್ಲಿ ಅಧಿಕೃತ, ಅನಧಿಕೃತ ಆಸ್ತಿ ದಾಖಲೆ ವಿತರಣೆಯಲ್ಲಿ ತಾರತಮ್ಯ, ಕೌನ್ಸಿಲ್‌ನಲ್ಲಿ ನಿರ್ಧಾರ ಕೈಗೊಳ್ಳದೇ ಪ್ರತಿಷ್ಠೆಯಲ್ಲಿ ಕರಪತ್ರಗಳ ಹಂಚಿಕೆಯ ಖಾಸಗಿ ಪ್ರಚಾರ, ಸ್ಥಳೀಯ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರದ ಬಗ್ಗೆ ಕಡೆಗಣನೆ, ಪಾರದರ್ಶಕ ಆಂದೋಲನದ ಸಿದ್ಧತೆಯಲ್ಲಿ ಏಕಪಕ್ಷೀಯ ತೀರ್ಮಾನ...

- ಇವು ನಗರಸಭೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಸದಸ್ಯರು ವ್ಯಕ್ತಪಡಿಸಿದ ಅಸಮಾಧಾನ ಮಾತುಗಳು.

ರಾಜ್ಯ ಸರ್ಕಾರವು ಇ-ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಜನರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆ ಕೌನ್ಸಿಲ್ ಸಭೆ ನಡೆಸಿ ಚರ್ಚಿಸದೆ ಶಾಸಕರು, ನಗರಸಭೆ ಅಧ್ಯಕ್ಷರು ಪ್ರತ್ಯೇಕವಾಗಿ ಕರಪತ್ರಗಳನ್ನು ಹಂಚಿ ಏಕಪಕ್ಷೀಯ ಪ್ರಚಾರದಲ್ಲಿ ತೊಡಗಿದ್ದಾರೆ. ದಲ್ಲಾಳಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಮಾತನ್ನು ಹೇಳುತ್ತಲೇ ನಗರಸಭೆಗೆ ಸಂಬಂಧಪಡದ ಖಾಸಗಿ ವ್ಯಕ್ತಿಗಳಿಂದ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಚೇರಿ ಬಾಗಿಲು ಮುಚ್ಚುತ್ತೀರಾ?

ಅಭಿಯಾನದ ಹೆಸರಿನಲ್ಲಿ ವಾರ್ಡ್‌ವಾರು ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲಾಗುತ್ತಿದೆ. ಎಲ್ಲರೂ ಹೊರಟು ಹೋದರೆ ನಗರಸಭೆ ಬಾಗಿಲನ್ನು ಮುಚ್ಚುತ್ತೀರಾ ಎಂದು ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್ ಪ್ರಶ್ನಿಸಿದರು.

ಈಗಾಗಲೇ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದರ ನಡುವೆ ಏಕಪಕ್ಷೀಯವಾಗಿ ವಾರ್ಡ್‌ವಾರು ಸಿಬ್ಬಂದಿಯನ್ನು ಕರೆದುಕೊಂಡು ಹೋಗಲಾಗುತ್ತಿದೆ. ಇದರಿಂದ ನಗರಸಭೆಯ ಇತರ ಸೇವಾ ಕಾರ್ಯಗಳು ಹೇಗೆ ನಿರ್ವಹಣೆಯಾಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಮೂರು ದಿನ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ತೀರ್ಮಾನಿಸಲಾಯಿತು.

ಖಾತೆಗಳನ್ನು ಕೊಡಲಾಗಲ್ಲ

ನಗರದ ವ್ಯಾಪ್ತಿಯಲ್ಲಿ ವಿತರಣೆಯಾಗಿರುವ 3 ಸಾವಿರ ನಿವೇಶನಗಳ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ (ಸಚಿವರಾಗಿದ್ದ ಡಾ. ಕೆ.ಸುಧಾಕರ್ ನೀಡಿರುವ ದಾಖಲೆ) ಖಾತೆಯನ್ನು ಕೊಡಲಾಗುವುದಿಲ್ಲ ಎಂದು ಪೌರಾಯುಕ್ತ ಮನ್ಸೂರ್ ಆಲಿ ಸ್ಪಷ್ಟಪಡಿಸಿದರು. ನಿಗದಿಪಡಿಸಿದ ಜಮೀನಿನ ಭೂ ಪರಿವರ್ತನೆ, ಅನುಮೋದನೆಯ ನಿವೇಶನಗಳ ವಿಂಗಡಣೆಯಾಗದಿರುವ ಸಂದರ್ಭದಲ್ಲಿ ಕೇವಲ ಹಕ್ಕುಪತ್ರ ದಾಖಲೆಯನ್ನು ಪರಿಗಣಿಸಿ ಖಾತೆ ನೀಡಲಾಗದು. ಸಂಬಂಧಪಟ್ಟವರು ಜಿಪಿಎಸ್ ಮೂಲಕ ಭಾವಚಿತ್ರ ಮತ್ತು ಜಾಗದ ಪೋಟೋ ಅಪ್‌ಡೇಟ್ ಮಾಡಬೇಕು. ಇದು ಜಾಗವೇ ಗೊತ್ತಿಲ್ಲದೇ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ತಾರತಮ್ಯ ನೀತಿ ಸರಿ ಇಲ್ಲ

ನಗರಸಭೆಯಲ್ಲಿ ಒಂದೇ ಬಡಾವಣೆಯಲ್ಲಿನ ಕೆಲವರಿಗೆ ಅಧಿಕೃತ, ಮತ್ತೆ ಹಲವರಿಗೆ ಅನಧಿಕೃತ ಖಾತೆ ಕೊಡುವ ತಾರತಮ್ಯ ನೀತಿಯ ಬಗ್ಗೆ ಕಣಿತಹಳ್ಳಿ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಚೇರಿಯಲ್ಲಿನ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಎಲ್ಲರಿಗೂ ಖಾತೆ ಒದಗಿಸಬೇಕು. ಗೊಂದಲ, ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಪ್ರಮುಖ ತೀರ್ಮಾನಗಳು

ಮಧ್ಯವರ್ತಿಗಳ ಹಾವಳಿ, ತಾರತಮ್ಯಕ್ಕೆ ಅವಕಾಶ ನೀಡದಿರುವುದು, ವಾರ್ಡ್‌ವಾರು ಆಯಾ ವ್ಯಾಪ್ತಿಯ ನಗರಸಭೆ ಸದಸ್ಯರ ನೇತೃತ್ವದಲ್ಲಿ ಖಾತೆ ಆಂದೋಲನ ನಿರ್ವಹಣೆ, ಕೌನ್ಸಿಲ್ ಹಾಗೂ ನಗರಸಭೆ ಅಧಿಕಾರಿಗಳನ್ನು ಹೊರತುಪಡಿಸಿ ಖಾಸಗಿ ಮತ್ತಿತರರಿಗೆ ನೇತೃತ್ವ ವಹಿಸದಿರುವುದು ಸೇರಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಕಚೇರಿಯಲ್ಲಿ ಕೇಂದ್ರ ಸ್ಥಾಪನೆ

ತ್ವರಿತವಾಗಿ ಜನರಿಗೆ ನಿಯಮಾನುಸಾರ ಆಸ್ತಿ ಖಾತೆಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಯಲ್ಲಿ ಶಾಶ್ವತ ಕೇಂದ್ರ ಸ್ಥಾಪಿಸಲಾಗಿದೆ. ನಗರದಲ್ಲಿ ಮೂರು ದಿನ ನಡೆಯುವ ಅಭಿಯಾನದ ಬಳಿಕ ಜನರು ಕಚೇರಿಗೆ ಬಂದು ಖಾತೆಗೆ ಅರ್ಜಿ ಸಲ್ಲಿಸಬಹುದು. ಇಲ್ಲಿಯೇ ಶಾಶ್ವತವಾಗಿ ಎ ಖಾತೆ ಸೇವೆ ಲಭ್ಯವಾಗಲಿದೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ತಿಳಿಸಿದ್ದಾರೆ.