ಮೈಸೂರು: ಇಂಡಿಯಾ ಮೈತ್ರಿಕೂಟ ಇದುವರೆಗೆ ಯಾರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆಗಲಿ ಎಂದು ಸಲಹೆ ನೀಡಿದ್ದಾರೆ. ಈ ವಿಚಾರ ಇಂಡಿಯಾ ಮೈತ್ರಿಕೂಟದಲ್ಲಿ ತೀರ್ಮಾನ ಆಗಬೇಕಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ನಮ್ಮ ಮನವಿಯನ್ನು ಅವರು ಬಹಳ ಸಮಾಧಾನದಿಂದ ಅವರು ಆಲಿಸಿದ್ದು, ಉತ್ತಮ ಸ್ಪಂದನೆ ಇತ್ತು. ಡಿ.23 ರಂದು ಬರದ ವಿಚಾರವಾಗಿ ಸಭೆ ನಡೆಸಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಮೋದಿ ಭೇಟಿಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅಮಿತ್ ಷಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಬರ ಅನುದಾನ ಹಂಚಿಕೆ ತೀರ್ಮಾನವಾಗುವ ಹಿನ್ನೆಲೆಯಲ್ಲಿ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ನರೇಗ ಯೋಜನೆಯಡಿ ಪ್ರಸ್ತುತ 100 ದಿನ ಕೆಲಸ ನೀಡಲಾಗುತ್ತಿದ್ದು, ಬರಗಾಲ ಹಿನ್ನೆಲೆಯಲ್ಲಿ 150 ದಿನ ಕೆಲಸ ನೀಡುವಂತೆ ಪ್ರಧಾನಿ ಅವರಲ್ಲಿ ಮನವಿ ಮಾಡಲಾಗಿದೆ. ಮಹಾದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸಹ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.