ಶಾಸಕ ಆರಗ ಜ್ಞಾನೇಂದ್ರ  
ಜಿಲ್ಲೆ

ಖಂಡ್ರೆ ಬಾಯಿತಪ್ಪಿ ಖರ್ಗೆ ಆಯ್ತು…

Shivamogga - Desk - Megha MS

ತೀರ್ಥಹಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅಪಾರ ಗೌರವವಿದೆ. ನಾನು ಅವರ ಕುರಿತು ಅವಹೇಳನದ ಮಾತುಗಳನ್ನಾಡಿಲ್ಲ. ಖಂಡ್ರೆ ಅವರ ಬಗ್ಗೆ ಹೇಳುವಾಗ ಬಾಯಿತಪ್ಪಿನಿಂದ ಖರ್ಗೆ ಎಂದಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕಾಂಗ್ರೆಸ್‌ನವರು ರಾಜಕಾರಣದ ಸಲುವಾಗಿ ನನ್ನ ಹೇಳಿಕೆಯನ್ನೇ ತಿರುಚಿದ್ದಾರೆ. ಖರ್ಗೆ ಹೆಸರು ಬಳಸಿದ್ದನ್ನು ದೃಢಪಡಿಸಿದರೆ ನಾನು ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ಹಿರಿಯ ಮುತ್ಸದ್ದಿಗಳೂ ಆಗಿರುವ ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಚುನಾವಣೆಯಲ್ಲಿ ಆಗಿರುವ ಸೋಲಿನ ಜಿದ್ದು ತೀರಿಸಲು ಸಮಯಕ್ಕಾಗಿ ಕಾಯುತ್ತಿದ್ದರು. ಸೋಲನ್ನು ಸಹಿಸಲಾಗದೆ ನನ್ನ ಚಾರಿತ್ರ‍್ಯಹರಣ ಮಾಡಲಾಗುತ್ತಿದೆ. ನಾನು ಜೀವಂತ ಇರುವುದೇ ಇವರಿಗೆ ಸಹಿಸಲಾಗುತ್ತಿಲ್ಲ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ದೂರಿದರು.
ಅರಣ್ಯ ಸಚಿವರು ಕಸ್ತೂರಿ ರಂಗನ್ ವರದಿ ಪರವಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಮಲೆನಾಡಿನ ಸಮಸ್ಯೆ ಕುರಿತಂತೆ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಇದರಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ. ಮುಂಗಡ ಪತ್ರದಲ್ಲಿ ದಲಿತರಿಗೆ ಮೀಸಲಿದ್ದ ಅರ್ಧದಷ್ಟು ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವ ಕಾಂಗ್ರೆಸಿಗರು ಇದರಲ್ಲಿ ರಾಜಕೀಯ ಮಾಡಬಾರದು. ರಾಜ್ಯ ಸರ್ಕಾರ ಅಽಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದು ತಮ್ಮ ವೈಫಲ್ಯವನ್ನು ಮುಚ್ಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇದನ್ನು ಎದುರಿಸುವ ಶಕ್ತಿ ನನಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಆರ್.ಮದನ್, ಕೆ.ಶ್ರೀನಿವಾಸ್, ಸಾಲೆಕೊಪ್ಪ ರಾಮಚಂದ್ರ, ನವೀನ್ ಹೆದ್ದೂರು, ಕವಿರಾಜ ಬೇಗುವಳ್ಳಿ, ಚಂದವಳ್ಳಿ ಸೋಮಶೇಖರ್, ಸಂದೇಶ್ ಜವಳಿ, ರಕ್ಷಿತ್ ಮೇಗರವಳ್ಳಿ, ಕುಕ್ಕೆ ಪ್ರಶಾಂತ್ ಇದ್ದರು.

ಕಸ್ತೂರಿ ರಂಗನ್ ವರದಿ ಕುರಿತಂತೆ ಅರಣ್ಯ ಸಚಿವರು ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಏಕವ್ಯಕ್ತಿ ಅಭಿಪ್ರಾಯದ ಈ ವರದಿ ಕುರಿತಂತೆ ರಾಜ್ಯ ಸರ್ಕಾರ ಸರಿಯಾದ ವರದಿ ನೀಡದ ಕಾರಣ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠ ಇದನ್ನು ಕೈಗೆತ್ತಿಕೊಂಡಿದೆ. ಯಥಾವತ್ತಾಗಿ ವರದಿ ಜಾರಿಯಾದರೆ ರಾಜ್ಯ ೨೨ ಸಾವಿರ ಕಿಮಿನಷ್ಟು ಪ್ರದೇಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಸೂಕ್ಷ÷್ಮ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತದ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ. ಸರ್ವೋಚ್ಚ ನ್ಯಾಯಾಲಯದಲ್ಲಿ ಪಶ್ಚಿಮಘಟ್ಟದ ಪರವಾಗಿ ವಾದಿಸಲು ಸಮರ್ಥ ವಕೀಲರನ್ನು ನೇಮಿಸಿ.| ಆರಗ ಜ್ಞಾನೇಂದ್ರಶಾಸಕ