ಜಿಲ್ಲೆ

ನಾಗರಿಕರ ರಕ್ಷಣೆ ಮಾಡುವಲ್ಲಿ ಖಾಕಿ ಪಾತ್ರ ಅನನ್ಯ

ಜಿಲ್ಲಾಧಿಕಾರಿ ಅಕ್ರಂಪಾಷಾ ಅಭಿಮತ -ಕೆಜಿಎಫ್​ ಪೊಲೀಸ್​ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಕೆಜಿಎಫ್​: ದಿನದ 24 ಗಂಟೆ ನಾಗರಿಕರ ರಕ್ಷಣೆ ಮಾಡುವಲ್ಲಿ ಮತ್ತು ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

ನಗರದ ಚಾಂಪಿಯನ್​ ರೀಫ್ಸ್​ನ ಪೊಲೀಸ್​ ಕವಾಯತು ಮೈದಾನದಲ್ಲಿ ಗುರುವಾರ ಕೆಜಿಎಫ್​ ಜಿಲ್ಲಾ ಪೊಲೀಸ್​ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾವುದೇ ದುರ್ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸುವ ಮೂಲಕ ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಪೊಲೀಸ್​ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಪೊಲೀಸರಿಗೆ ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಒತ್ತು ನೀಡಿದ್ದು, ಡಿಎಆರ್​ ವಸತಿ ಗೃಹಗಳಿಗೆ ಕುಡಿಯುವ ನೀರು, ಸೋಲಾರ್​ ವಾಟರ್​ ಹೀಟರ್​, ಮೈದಾನ, ಶೌಚಗೃಹಗಳ ನಿಮಾರ್ಣ ಸೇರಿ ಎಲ್ಲ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 100 ವರ್ಷಗಳಿಗೂ ಹಳೆಯದಾದ ಹಲವು ಸರ್ಕಾರಿ ಶಾಲೆಗಳಿದ್ದರೂ ಇದುವರೆವಿಗೂ ಒಂದು ಶಾಲೆಗೂ ದಾಖಲೆಗಳಿರಲಿಲ್ಲ. ಜಿಲ್ಲೆಯ ಜಿಲ್ಲಾಧಿಕಾರಿಯಾದ ಬಳಿಕ 1,950 ಶಾಲೆಗಳ ಪೈಕಿ 1,700ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಮತ್ತು 2,100 ಅಂಗನವಾಡಿ ಕೇಂದ್ರಗಳಿಗೆ ಇ-&ಆಸ್ತಿ, ಇ-ಸ್ವತ್ತು, ಆರ್​ಟಿಸಿ ಸೇರಿ ಕಂದಾಯ ದಾಖಲೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಹಲವು ತಿಂಗಳ ಹಿಂದೆ ಗೃಹ ಮಂತ್ರಿಗಳು ಕೆಜಿಎಫ್​ಗೆ ಆಗಮಿಸಿದ್ದಾಗ ಇಲ್ಲಿನ ಪೊಲೀಸ್​ ತರಬೇತಿ ಶಾಲೆ ತೆರೆಯಲು ಅನುಮತಿ ನೀಡುವಂತೆ ಸ್ಥಳಿಯ ಶಾಸಕರು ಮನವಿ ಮಾಡಿದಾಗ ಜಾಗ ನೀಡಿದಲ್ಲಿ ಮಂಜೂರು ಮಾಡುವುದಾಗಿ ಗೃಹ ಮಂತ್ರಿಗಳು ತಿಳಿಸಿದ್ದರು. ಇದಾದ 20 ದಿನಗಳಲ್ಲಿ ಪೊಲೀಸ್​ ತರಬೇತಿ ಶಾಲೆ ಸ್ಥಾಪಿಸಲು 100 ಎಕರೆ ಮಂಜೂರು ಮಾಡಿಸುವಲ್ಲಿ ಎಸ್ಪಿ ಶಾಂತರಾಜು ಅವರ ಪಾತ್ರ ಬಹಳ ಮಹತ್ವದ್ದು ಎಂದರು.

ಮುಂದಿನ ದಿನಗಳಲ್ಲಿ ಇಂಡಿಯನ್​ ರಿಸರ್ವ್​ ಬೆಟಾಲಿಯನ್​ (ಕೇಂದ್ರ ಮೀಸಲು ಪಡೆ) ಸ್ಥಾಪನೆಯಾಗಲಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಹಕಾರಿಯಾಗಲಿದೆ. ಪೊಲೀಸ್​ ಇಲಾಖೆಯೊಂದಿಗೆ ಜಿಲ್ಲಾಡಳಿತ ಉತ್ತಮ ಒಡನಾಟವನ್ನಿಟ್ಟುಕೊಳ್ಳವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಪೊಲೀಸ್​ ಉಪಾಧೀಕ್ಷಕ ಪಾಂಡುರಂಗ, ಕೆಜಿಎಫ್​ ಪೊಲೀಸ್​ ಜಿಲ್ಲೆಯ ಎಲ್ಲ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ನೌಕರರು ಮತ್ತಿತರರು ಇದ್ದರು.