* ಮೂರು ತಿಂಗಳಿಂದ 23 ಪ್ರಕರಣ ದಾಖಲು
* ಹೆಡೆಮುರಿ ಕಟ್ಟಲು ಕಾರ್ಯಾಚರಣೆ
* 28 ಕೆಜಿಗೂ ಅಧಿಕ ಗಾಂಜಾ ವಶ
ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಾಂಜಾ ಘಾಟನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು ಮೂರು ತಿಂಗಳಿಂದ 23 ಪ್ರಕರಣ ದಾಖಲಿಸುವ ಮೂಲಕ ಸಮಾಜಕ್ಕೆ ಕಂಟಕವಾಗಿರುವವಿಗೆ ಹೆಡೆಮುರಿ ಕಟ್ಟುವ ಕೆಲಸ ಆರಂಭಿಸಿದೆ.
ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ರಾಮನಗರ ಜಿಲ್ಲೆಯಲ್ಲಿಯೂ ಗಾಂಜಾ ಅಮಲಿನಲ್ಲಿ ತೇಲುತ್ತಲೇ ಇದೆ. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವ ಹೊರತಾಗಿಯೂ, ಒಮ್ಮೊಮ್ಮೆ ಪೊಲೀಸ್ ಇಲಾಖೆ ತಟಸ್ಥ ನೀತಿಯ ಪರಿಣಾಮ ಸದ್ದಿಲ್ಲದೆ ಇದರ ವ್ಯಾಪ್ತಿ ಹೆಚ್ಚುತ್ತಲೇ ಹೋಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯಾಚರಣೆ ಪರಿಣಾಮ 90 ದಿನಗಳ ಅಂತರದಲ್ಲಿ ಬರೋಬ್ಬರಿ 26 ಅಕ್ರಮ ಗಾಂಜಾ ಮಾರಾಟಗಾರರನ್ನು ಬಂಧಿಸಿ, ಸುಮಾರು 28 ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಗಾಂಜಾ ಎನ್ನುವುದು ನಗರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಇದು ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿದೆ. ವಸತಿ ರಹಿತ ಪ್ರದೇಶ, ಶಾಲಾ ಮೈದಾನಗಳು ವ್ಯಸನಿಗಳು ಮತ್ತು ಪೂರೈಕೆದಾರರ ನೆಚ್ಚಿನ ತಾಣಗಳಾಗಿ ಬದಲಾಗಿವೆ. ನಗರ ಪ್ರದೇಶದಿಂದಲೇ ಗ್ರಾಮೀಣ ಯುವಕರಿಗೆ ಗಾಂಜಾ ಪೂರೈಕೆ ಆಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಹರಿಸಬೇಕಿದೆ.
ಈ ಮೊದಲು ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಪೊಲೀಸರ ಅತಿಥಿಗಳಾಗುತ್ತಿದ್ದವರೇ ಹೆಚ್ಚು. ಆದರೆ, ಕಳೆದ ಮೂರು ತಿಂಗಳಿಂದ ಬಂ‘ನಕ್ಕೆ ಒಳಗಾದವರಲ್ಲಿ ಹೆಚ್ಚಿನ ಮಂದಿ ನಿರ್ಜನ ಪ್ರದೇಶ, ಶಾಲಾ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಸಣ್ಣ ಪೊಟ್ಟಣಗಳ ಮೂಲಕ ಗಾಂಜಾವನ್ನು ಮಾರಾಟ ಮಾಡುತ್ತಿದ್ದವರೇ ಹೆಚ್ಚು ಎನ್ನುವುದು ಆತಂಕಕಾರಿ ವಿಚಾರ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆ, ವಸತಿ ಪ್ರದೇಶ, ಮಕ್ಕಳು ಓದುವ ಶಾಲಾ ಕಾಲೇಜುಗಳ ಬಳಿ ಅನುಮಾನ ಮೂಡಿಸುವ ರೀತಿಯ ವ್ಯಕ್ತಿಗಳು ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೆ ಉತ್ತಮ.
ಗಾಂಜಾ ನಶೆಗೆ ಆಕರ್ಷಿತರಾಗುತ್ತಿರುವುದು ಯುವ ಸಮುದಾಯ. ಇದಕ್ಕೆ ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸದೇ ಇರುವುದೇ ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಚಲನವಲನ ಮತ್ತು ಅವರು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಇಲ್ಲವಾದರೆ ಮಕ್ಕಳು ಕುಟುಂಬಕ್ಕೆ ಮಾತ್ರವಲ್ಲದೆ, ಸಮಾಜಕ್ಕೆ ಹೊರೆಯಾಗುವುದು ಖಂಡಿತ.
ಮಾದಕ ವಸ್ತುಗಳ ಬಳಕೆ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಯುವ ಸಮುದಾಯವನ್ನು ಇದರಿಂದ ಹೊರತರುವ ಸಲುವಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ, ಗಾಂಜಾ ಬೆಳೆಗಳನ್ನು ಬೆಳೆದಿರುವುದು ಸೇರಿ ಇತರೆ ಮಾಹಿತಿಗಳು ಲಭ್ಯವಾದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. ಇದು ಪೊಲೀಸ್ ಕಾರ್ಯಾಚರಣೆಗೂ ಅನುಕೂಲವಾಗಲಿದೆ.
ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಹೊರತಾಗಿಯೂ ನಿಯಂತ್ರಣ ಎನ್ನುವುದು ಇನ್ನು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುವವರ ಜತೆಗೆ, ಇವುಗಳನ್ನು ಪೂರೈಸುವವರ ವಿರುದ್ಧವೂ ಕಾರ್ಯಾಚರಣೆ ನಡೆಯಬೇಕಿದೆ. ಮೂಲಕ್ಕೆ ನಿರಂತರ ಪೆಟ್ಟು ಬಿದ್ದರಷ್ಟೇ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಮಾದಕ ವ್ಯಸನಕ್ಕೆ ಮುಕ್ತಿ ನೀಡಬಹುದಾಗಿದ್ದು, ಪೊಲೀಸ್ ಕಾರ್ಯಾಚರಣೆಯೂ ಯಶಸ್ಸಿನ ಗುರಿ ಮುಟ್ಟುತ್ತದೆ.‘
ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ತಾವರೆಕೆರೆ ಮತ್ತು ರಾಮನಗರ ಟೌನ್ ಪೊಲಿಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿ 81 ಕೆಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿತ್ತು. ಮಾರಾಟ ಮಾಡಲು ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಮಾಗಡಿ ತಾಲೂಕಿನ ಬಂಡರಗುಪ್ಪೆ ಸಮೀಪ ಪರೀಶಲನೆ ಮಾಡಲಾಗಿ 60 ಕೆಜಿ ಗಾಂಜಾ ಪತ್ತೆಯಾಗಿದೆ. ಇದರ ನಡುವೆ ಮತ್ತೊಂದೆಡೆ ರಾಮನಗರ ಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ 21 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದದ್ದು ಬೆಳಕಿ ಬಂದಿತ್ತು.
ಮಾದಕ ವಸ್ತುಗಳ ಅಕ್ರಮ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಮ್ಮ ಪೊಲೀಸ್ ಇಲಾಖೆ ಕಾರ್ಯೋನ್ಮುಕವಾಗಿದೆ. ಪೆಡ್ಲರ್‌ಗಳ ಬಂ‘ನದ ಜತೆಗೆ, ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ನಾಲ್ಕನೇ ಶನಿವಾರ ಮಾಡಲಾಗುತ್ತಿದೆ. ನಮ್ಮ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಆರ್.ಶ್ರೀನಿವಾಸ್ ಗೌಡ, ಎಸ್‌ಪಿ, ರಾಮನಗರ