ಜಿಲ್ಲೆ

ಅಡಕೆ, ಶುಂಠಿ ಕದ್ದೊಯ್ದ ಖದೀಮರು

Haveri - Desk - Ganapati Bhat

ಹಾನಗಲ್ಲ: ತಾಲೂಕಿನ ಅಕ್ಕಿಆಲೂರಿನ ತೋಟಗಳಲ್ಲಿ ಅಡಕೆ, ಬೈಚವಳ್ಳಿ ಗ್ರಾಮದ ಹೊಲದಲ್ಲಿ ಶುಂಠಿ ಕಳ್ಳತನ ಮಾಡಿದ ಪ್ರಕರಣಗಳು ನಡೆದಿವೆ.

ಬೈಚವಳ್ಳಿ ಗ್ರಾಮದ ಶಂಕರಪ್ಪ ಮಲ್ಲೇಶಪ್ಪ ರಾವರಗೇರಿ ಎಂಬ ರೈತನ ಹೊಲದಲ್ಲಿ ಬೆಳೆಯಲಾಗಿದ್ದ ಹಸಿಶುಂಠಿಯನ್ನು ರಾತ್ರಿ ವೇಳೆಯಲ್ಲಿ 9 ಮಡಿಗಳಷ್ಟು ಅಗೆದು ಕದ್ದೊಯ್ದ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಅಡಕೆ ದರ ಹೆಚ್ಚಾದ್ದರಿಂದ ಅಡಕೆ ಕಳವು ಮಾಡಿದ ಪ್ರಕರಣಗಳು ಮಾತ್ರ ನಡೆದಿದ್ದವು. ಇದೀಗ ಮಾರುಕಟ್ಟೆಯಲ್ಲಿ ಶುಂಠಿಯ ದರ ಕ್ವಿಂಟಾಲ್​ಗೆ 26 ಸಾವಿರ ರೂ. ದಾಟಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಹೊಲದಲ್ಲಿ ಮಡಿಗಳಲ್ಲಿದ್ದ ಸುಮಾರು 4 ಕ್ವಿಂಟಾಲ್​ಗಳಷ್ಟು ಹಸಿಶುಂಠಿಯನ್ನು ಅಗೆದು ಕದ್ದೊಯ್ದಿದ್ದಾರೆ. ಕ್ರೈಂ ಪಿಎಸ್​ಐ ಕೆಂಚಪ್ಪ ಹಳ್ಳಿಯವರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಸುಮಾರು 1.20 ಲಕ್ಷ ರೂಪಾಯಿಗಳ ಶುಂಠಿ ಕದ್ದೊಯ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸಲು ಶ್ವಾನದಳ ಕರೆಸಿ ಪರಿಶೀಲಿಸಲಾಗಿದೆ. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕಿಆಲೂರಿನ ಅಡಕೆ ತೋಟಗಳಲ್ಲಿ ರಾತ್ರಿ ವೇಳೆಯಲ್ಲಿ ಗಿಡಗಳಲ್ಲಿದ್ದ ಹಸಿ ಅಡಕೆಯನ್ನು ಕಡಿದು ಕೊಂಡೊಯ್ದ ಪ್ರಕರಣ ನಡೆದಿದೆ. ಅಕ್ಕಿಆಲೂರು ಗ್ರಾಮದ ರೈತರಾದ ಮಲ್ಲಿಕಾರ್ಜುನ ಕಂಬಾಳಿ, ಮುರುಗೇಶ ಸಾಲವಟಗಿ, ಗಂಗಾಧರ ಸವಣೂರ, ಮಂಜಪ್ಪ ತಳವಾರ ಇವರ ತೋಟಗಳಲ್ಲಿ ಸುಮಾರು ನಾಲ್ಕು ಕ್ವಿಂಟಾಲ್​ನಷ್ಟು ಅಡಕೆ ಕಳ್ಳತನ ಮಾಡಲಾಗಿದೆ. ಸುಮಾರು 35 ಸಾವಿರ ರೂ.ಗಳ ಬೆಳೆಯ ಅಡಕೆ ಇದಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು, ಅಕ್ಕಿಆಲೂರಿನ ಇಂದಿರಾನಗರ ನಿವಾಸಿಗಳಾದ ಮೋಹನ್ ಕೊಂಡ್ಲೇರ್(20), ದುರುಗಪ್ಪ ದ್ಯಾಮಣ್ಣ ಕಾಳೇರ(44), ಗುಡ್ಡಪ್ಪ ಬಸಪ್ಪ ಹೆಬ್ಬಾಳ(38) ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದಷ್ಟು ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ.