ಜಿಲ್ಲೆ

ಮರ್ಯಾದಸ್ಥ ರಾಜಕಾರಣಿ ಅತ್ಯಗತ್ಯ: ಬಸವರಾಜ ಹೊರಟ್ಟಿ

ವಿಜಯವಾಣಿ ಸುದ್ದಿಜಾಲ ಗದಗ,

ರಾಜ್ಯಕ್ಕೆ ಮರ್ಯಾದವಂತ ರಾಜಕಾರಣಿ ಮತ್ತು ರಾಜಕಾರಣ ಅಗತ್ಯವಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸ್ವಾಮೀ ವಿವೇಕಾನಂದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಅವರ 98ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕಾರಣದಲ್ಲಿನ ಬೆಳವಣಿಗೆ ಕುರಿರು ಕಳವಳ ವ್ಯಕ್ತ ವ್ಯಕ್ತಪಡಿಸಿ ರಾಜಕಾರಣ ಇಂದು ಉದ್ಯೋಗ ಆಗುತ್ತಿದೆ. ಯುವ ರಾಜಕಾರಣಿಗಳು ತತ್ವ ಆದರ್ಶಗಳನ್ನು ರೂಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆ.ಎಚ್. ಪಾಟೀಲ ಅವಧಿಯ ರಾಜಕಾರಣ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹೊರಟ್ಟಿ, ಅವರ ಮಾತು ಮತ್ತು ಕೃತಿಗಗಳು ಇಂದಿಗೂ ಮಾದರಿ. ಅವರ ಮುಂದೆ ಸುಳ್ಳು ಹೇಳಲು ಸಾಧ್ಯವೇ ಇರಲಿಲ್ಲ. ರಾಜ್ಯದಲ್ಲಿ ಬಹುದೊಡ್ಡ ಹೋರಾಟಗಾರರಾಗಿದ್ದರು. ರಾಜಕಾರಣಕ್ಕೆ, ಸ್ನೇಹಕ್ಕೆ ಎಂದಿಗೂ ತೊಡಕು ತಂದು ಕೊಂಡವರಲ್ಲ ಎಂದು ಬಸವರಾಜ ಹೊರಟ್ಟಿ ನುಡಿದರು.

ಕಾಂಗ್ರೆಸ್ ಮುಖಂಡ ಎಚ್. ಆಂಜನೇಯ ಮಾತನಾಡಿ, ಎಚ್.ಕೆ.ಪಾಟೀಲರು ಮುಂದಿನ ದಿನಗಳಲ್ಲಿ ಸಿಎಂ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ. ಕೆ.ಎಚ್.ಪಾಟೀಲರಿಗೆ ಸಿಗದೇ ಇರುವಂತಹ ಅವಕಾಶ ಎಚ್. ಕೆ. ಪಾಟೀಲರಿಗೆ ಸಿಗಲಿ. ಇಂದು ರಾಜಕೀಯ ಕಲುಷಿತವಾಗಿದೆ. ಪ್ರಾಮಾಣಿಕ ರಾಜಕೀಯ ಮಾಯವಾಗಿದೆ, ಕೆ.ಎಚ್. ಪಾಟೀಲರು ಹಾಕಿಕೊಟ್ಟ ತತ್ವ ಮಾರ್ಗದಲ್ಲಿ ಸಾಗಬೇಕು ಎಂದು ಎಚ್.ಆಂಜನೇಯ ಹೇಳಿದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರು ದಿಟ್ಟ, ನಿರ್ಭಿಡೆಯ ನಾಯಕರಾಗಿದ್ದರು. ಅವರಂತವರನ್ನು ಈಗಲೂ ನೋಡಲು ಸಾಧ್ಯವಿಲ್ಲ, ನೇರವಾಗಿ ಮಾತನಾಡುವ ಅವರನ್ನು ಹಲವಾರು ಜನರು ವಿರೋಧಿಸುತ್ತಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.ಎಚ್.ಕೆ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ 5 ಲಕ್ಷ ನಗದು ಸಹಿತ ಕೆ.ಎಚ್. ಪಾಟೀಲ ಪ್ರಶಸ್ತಿಯನ್ನು ನೇತ್ರತಜ್ಞ ಎಂ.ಎಂ. ಜೋಶಿ ಅವರಿಗೆ ವಿತರಿಸಲಾಯಿತು.

ಕಾರ್ಯಕ್ರಮ ದಲ್ಲಿ ಎಂ.ಎಂ. ಜೋಶಿ, ಎಚ್.ಕೆ.ಪಾಟೀಲ, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ, ಎಚ್.ಆಂಜನೇಯ, ಎ.ಎಂ.ಹಿಂಡಸಗೇರಿ, ಬಸವರಾಜ ಹೊರಟ್ಟಿ, ಎಸ್.ಎಸ್.ಪಾಟೀಲ, ಪ್ರಮೋದ ಹೆಗಡೆ, ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ, ಜಿ.ಎಸ್. ಗಡ್ಡದೇವರಮಠ, ಡಿ.ಆರ್.ಪಾಟೀಲ, ವಾಸಣ್ಣ ಕುರುಡಗಿ, ಕೊಟ್ರಪ್ಪ ಬಸೇಗಣ್ಣಿ, ಸಿದ್ದು ಪಾಟೀಲ, ವಿದ್ಯಾಧರ ದೊಡ್ಡಮನಿ, ಹುಮಾಯೂನ್‌ ಮಾಗಡಿ, ಸಚಿನ್ ಪಾಟೀಲ ಹಲವರು ಇದ್ದರು.

ಕೋಟ್:
ಕೆ.ಎಚ್.ಪಾಟೀಲ ಅವರ ಗರಡಿಯಲ್ಲಿ ಬೆಳೆದವರು ನಾವು, ಅಂದು ಯುವ ನಾಯಕರಾಗಿದ್ದೆವು. ದೇವರಾಜ ಅರಸ ಬಲಗೈಯಾಗಿ ಕೆ.ಎಚ್.ಪಾಟೀಲ ಕೆಲಸ ಮಾಡಿದ್ದರು, ಹೊಂದಾಣಿಕೆ ಮಾಡಿಕೊಳ್ಳದ ನಾಯಕರಾಗಿದ್ದರು.
ಎಚ್.ಎಂ. ರೇವಣ್ಣ

ಕೋಟ್:
ನಾನು ಯುವಕನಾಗಿದ್ದೆ. ನನಗೆ ರಾಜಕಾರಣದ ಮಾರ್ಗದರ್ಶನ ಮಾಡುತ್ತಿದ್ದು. ಬೈದು ಬುದ್ದಿ ಹೇಳುತ್ತಿದ್ದರು. ಅವರೇ ಕರೆದು ಕೆಪಿಸಿಸಿಯಲ್ಲಿ ಒಂದು ಮಹತ್ವದ ಸ್ಥಾನ ಕೊಟ್ಟರು.
ಕೆ.ಎಚ್.ಮುನಿಯಪ್ಪ..

ಕೋಟ್
ಎಂಎಂ ಜೋಶಿ ಅವರ ಕಣ್ಣಿನ ಸೇವೆ ಅನನ್ಯ. ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಇದಕ್ಕೆ ಖಾಸಗಿ ವೈದ್ಯರು ಶ್ರಮದಾನವು ಕಾರಣ. ಕಾಯಕವೇ ಕೈಲಾಸ ಎಂದು ಜೋಶಿ ಕಾರ್ಯ ನಿರ್ವಹಿಸಿದ್ದಾರೆ.
ಬಿ.ಕೆ. ಹರಿಪ್ರಸಾದ

ಬಾಕ್ಸ್
ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿದ ಬಿ.ಕೆ. ಹರಿಪ್ರಸಾದ್

ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, 15 ಶಾಸಕರಿಗೆ ಟಿಕೆಟ್ ಬೇಡ ಎಂದು ಕಾಂಗ್ರೆಸ್ ಹಿರಿಯ ಮುಖಂಡರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸಿದ್ದರ ಕುರಿತು ಮಾತನಾಡಿದರು. ಖರ್ಗೆಯವರಿಗೆ ಎಚ್. ಕೆ. ಪಾಟೀಲ,ಕೆ.ಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್ ಭೇಟಿಯಾಗಿ ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದಾರೆ. 15 ಶಾಸಕರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳಿಲ್ಲ‌. ಈವೆಲ್ಲವೂ ಊಹಾಪೋಹ ಎಂದರು. ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿಚಾರ ಕುರಿತು ಮಾತನಾಡಿ, ರಾಷ್ಟ್ರದ ಒಕ್ಕೂಟ ವ್ಯವಸ್ಥೆಯ ವಿರುದ್ಧದ ಈ ಕ್ರಮವನ್ನ ಖಂಡಿಸುತ್ತೇವೆ ಎಂದರು.
ಲಂಡನ್ ನಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಮರ್ಥನೆ ನೀಡಿದ ಬಿ.ಕೆ. ಹರಿಪ್ರಸಾದ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ.