ವಿಜಯವಾಣಿ ಸುದ್ದಿಜಾಲ ಗದಗ
ನಗರದ ಬೆಟಗೇರಿಯ ಕಣಗಿನಹಾಳ ರಸ್ತೆಯಲ್ಲಿರುವ ಐಟಿಐ ಮಹಿಳಾ ಕಾಲೇಜಿಗೆ "ಕೆ.ಎಚ್.ಪಾಟೀಲ' ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಎಂದು ಮಂಗಳವಾರ ಸಚಿವ ಎಚ್. ಕೆ. ಪಾಟೀಲ ನಾಮಕರಣ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಐಟಿಐ ಕಾಲೇಜು 1990&-91 ರಲ್ಲಿ ವಿಶ್ವ ಬ್ಯಾಂಕ್ ಯೋಜನೆ ಅಡಿಯಲ್ಲಿ ಮಂಜೂರಾಗಿತ್ತು. ಸ್ವಂತ ಕಟ್ಟಡ ಇಲ್ಲದ ಕಾರಣ ಕೆ. ಎಚ್. ಪಾಟೀಲ ಅವರು ಬೆಟಗೇರಿಯಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ವಸತಿ ನಿಲಯದಲ್ಲಿ ತಾತ್ಕಾಲಿಕ ತರಬೇತಿ ನೀಡಲು ಅನುಕೂಲ ಮಾಡಿಕೊಟ್ಟಿದ್ದರು. ಸಾವಿರಾರು ಬಡಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಬೆಳೆಯುವಂತೆ ಮಾಡಿದ್ದು ಕೆ.ಎಚ್. ಪಾಟೀಲರು ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ದೂರದೃಷ್ಟಿಯ ಹರಿಕಾರ, ಕೆ.ಎಚ್.ಪಾಟೀಲ ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ಐಟಿಐ ಕಾಲೇಜಿನಲ್ಲಿ ಈ ಬಾಗದ ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ರಾಜ್ಯದ, ದೇಶದ ವಿವಿಧ ರಂಗಗಳಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂತಾಗಲಿ ಹಾಗೂ ಇತರರಿಗೆ ಉದ್ಯೋಗದಾತರಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ. ಆರ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಸವಪ್ರಭು ಹಿರೇಮಠ, ಐಟಿಐ ಸಂಸ್ಥೆಯ ಪ್ರಾಚಾರ್ಯ ಡಾ. ಮಲ್ಲೂರ ಬಸವರಾಜ ಸೇರಿದಂತೆ ಇತರರು ಇದ್ದರು.