ಜಿಲ್ಲೆ

ಕೆ.ಎಚ್​. ಪಾಟೀಲರು ನೇರ, ನಿಷ್ಠುರ ರಾಜಕಾರಣಿ: ಸಚಿವ ಕೆ.ಎನ್​. ರಾಜಣ್ಣ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಸಹಕಾರಿ ಧುರೀಣ ಕೆ.ಎಚ್​. ಪಾಟೀಲರು ರೈತರ ಏಳ್ಗೆಗೆ ತಮ್ಮ ಜೀವಿತಾವಧಿಯಲ್ಲಿ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಎಂದು ಸಹಕಾರಿ ಸಚಿವ ಕೆ.ಎನ್​. ರಾಜಣ್ಣ ಹೇಳಿದರು.
ಶನಿವಾರ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್​. ಪಾಟೀಲ ವಿದ್ಯಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್​. ಪಾಟೀಲ ಅವರ ಜನ್ಮಶತಮಾನೋತ್ಸವ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೆ.ಎಚ್​. ಪಾಟೀಲರು ನಿಷ್ಠುರ ರಾಜಕಾರಣಿ. ರಾಜಕೀಯ ಜೀವನದಲ್ಲಿ ನಿಜ ಹೇಳಿ ದ್ವೇಷ ಕಟ್ಟಿಕೊಳ್ಳುತ್ತಿದ್ದರು ವಿನಹ ಸುಳ್ಳು ಹೇಳುತ್ತಿರಲಿಲ್ಲ. ರಾಜಕಾರಣಿಗಳಿಗೆ ಸುಳ್ಳೆ ಬಂಡವಾಳ. ಆದರೆ ಕೆ.ಎಚ್​. ಪಾಟೀಲ ಅದಕ್ಕೆ ವ್ಯತಿರಿಕ್ತರಾಗಿದ್ದರು. ಅವರ ನೇರ ನುಡಿಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಎಲ್ಲ ಜಿಲ್ಲೆಗಳಲ್ಲಿ ಅವರ ಜೀವನ, ಸಾಧನೆ, ರಾಜಕಾರಣ ಕುರಿತಾದ ಕಿರು ಹೊತ್ತಿಗೆಯನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಕೆ.ಎಚ್​. ಪಾಟೀಲರು ನೇರ ನುಡಿಯ ನಿಷ್ಠುರ ರಾಜಕಾರಣಿಯಾಗಿದ್ದರು. ಆದರೆ ಎಚ್​. ಕೆ. ಪಾಟೀಲರು ಸೌಮ್ಯ ಸ್ವಭಾವದವರು. ಸೌಮ್ಯವಾಗಿಯೇ ಕೆ.ಎಚ್​. ಪಾಟೀಲರಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಎಚ್​.ಕೆ. ಪಾಟೀಲ ಮಾಡಿದ್ದಾರೆ. ಆದರೆ, ಕೆ.ಎಚ್​. ಪಾಟೀಲ ಅವರ ಗತ್ತು ಎಚ್​.ಕೆ. ಪಾಟೀಲ ಅವರಿಗೆ ಬರಲಿಲ್ಲ. ಆದರೆ, ಮೃದುವಾಗಿಯೇ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ಕೆ.ಎಚ್​. ಪಾಟೀಲ ಅವರ ಕಾರ್ಯವನ್ನು ಡಿ.ಆರ್​. ಪಾಟೀಲ, ಎಚ್​.ಕೆ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರ ಜೀವನ ಸಾಧನೆ, ರಾಜಕಾರಣವನ್ನು ವರ್ಷರ್ಪೂತಿ ಯುವಕರಿಗೆ ತಿಳಿಸುವ ಕೆಲಸವನ್ನು ಜನ್ಮಶತಮಾನೋತ್ಸವದ ಮೂಲಕ ನಡೆಯಲಿ ಎಂದರು.
ತುಮಕೂರು ಸಂಸದ ಜಿ.ಎಸ್​. ಬಸವರಾಜ ಮಾತನಾಡಿ, ನಾನು ಸಂಸದನಾಗಲು ಕಾರಣ ಕೆ.ಎಚ್​. ಪಾಟೀಲರು. 22 ವರ್ಷ ಕಾಂಗ್ರೆಸ್​ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಲು ಮಾರ್ಗದರ್ಶನ ಮಾಡಿದರು. ಅವರ ವ್ಯಕ್ತಿತ್ವವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಬದುಕು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್​. ಪಾಟೀಲ, ನಾಡು ಕಂಡ ಧೀಮಂತ ರಾಜಕಾರಣಿ ದಿ. ಕೆ.ಎಚ್​. ಪಾಟೀಲ ಅವರ ಜನ್ಮಶತಮಾನೋತ್ಸವವನ್ನು ವರ್ಷರ್ಪೂತಿ ಆಚರಣೆ ಮಾಡಲಾಗುವುದು. ಆ ಮೂಲಕ ಕೆ.ಎಚ್​. ಪಾಟೀಲ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಚಿವ ಎಚ್​.ಕೆ. ಪಾಟೀಲ ಮಾತನಾಡಿ, ಕೆ.ಎಚ್​. ಪಾಟೀಲರ ಚಿಂತನೆಯನ್ನು ಪ್ರತಿ ಭಾನುವಾರ ಅನುಷ್ಠಾನ ಆಗುವ ಹಾಗೆ ವರ್ಷರ್ಪೂತಿ ಮಾಡಲಾಗುವುದು. ಅವರ ಚಿಂತನೆಗಳನ್ನು ಕಾರ್ಯ ರೂಪಕ್ಕೆ ತರಲು ರಚನಾತ್ಮಕ ಕಾರ್ಯಕರ್ತರ ಪಡೆ ಸಿದ್ಧಗೊಳಿಸಲಾಗುವುದು. ಕಾರ್ಯಪಡೆಯು ಅವರ ಕನಸು ನನಸು ಮಾಡಲು ಶ್ರಮಿಸಲಿದೆ ಎಂದರು.
ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಎಚ್​. ಪಾಟೀಲ ಕಿಡ್ನಿ ಕೇರ್​ ಸೆಂಟರ್​ ಗೆ ಸಂಸದ ಜಿ.ಎಸ್​. ಬಸವರಾಜ ಚಾಲನೆ ನೀಡಿದರು. "ಜನಮೆಚ್ಚಿದ ನಾಯಕ' ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಶಾಸಕ ಶ್ರೀನಿವಾಸ ಮಾನೆ, ಎನ್​.ಎಚ್​. ಕೋನರೆಡ್ಡಿ, ಮಾಜಿ ಶಾಸಕ ಬಿ.ಆರ್​.ಯಾವಗಲ್​, ಜಿ. ಎಸ್​. ಗಡ್ಡದೇವರಮಠ, ರಾಮಣ್ಣ ಲಮಾಣಿ, ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಬಿ.ಬಿ. ಅಸೂಟಿ, ಮಿಥುನ್​ ಪಾಟೀಲ, ಅಕ್ಬರ್​ ಸಾಬ ಬಬಚಿರ್, ಎಲ್​.ಡಿ. ಚಂದಾವರಿ ಇತರರು ಉಪಸ್ಥಿತರಿದ್ದರು.