ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ಜಿಮಖಾನಾ ಅಸೋಸಿಯೇಶನ್ ವತಿಯಿಂದ "ಕರ್ನಾಟಕ ಜಿಮಖಾನಾ ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್ (ಕೆಜಿಪಿಎಲ್) ಸೀಸನ್ -2' ಪಂದ್ಯಾವಳಿಗೆ ಬುಧವಾರ ನಗರದ ಕೆಜಿಎ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ದಿನದ ಅಂಗವಾಗಿ ಏರ್ಪಡಿಸಿರುವ ಬ್ಯಾಡ್ಮಿಂಟನ್ ಲೀಗ್ ಪಂದ್ಯವನ್ನು ಕೆಜಿಎ ಚೇರ್ಮನ್ ಎಚ್.ಎನ್. ನಂದಕುಮಾರ ಉದ್ಘಾಟಿಸಿದರು.
ಬ್ಯಾಡ್ಮಿಂಟನ್ ಆಟವು ದೇಹ ಮತ್ತು ಮನಸ್ಸಿಗೆ ಉತ್ತಮ ಆರೋಗ್ಯ ನೀಡುವ ಕ್ರೀಡೆಯಾಗಿದೆ. ಉದಯೋನ್ಮುಕ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕೆಜಿಎ ವೈಸ್ ಚೇರ್ಮನ್ ಗೋವಿಂದ ಜೋಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಬ್ಯಾಡ್ಮಿಂಟನ್ ಪಟುಗಳನ್ನು ತರಬೇತಿಗೊಳಿಸಲು ಕೆಜಿಎ ಶ್ರಮ ವಹಿಸುತ್ತಿದೆ ಎಂದರು.
ಕೆಜಿಎ ಕಾರ್ಯದಶಿರ್ ವೀರಣ್ಣ ಸವಡಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಕ್ರೀಡಾ ಸಂಯೋಜಕ ಉದಯ ಬಾಡ್ಕರ್, ಕೆಜಿಎ ವತಿಯಿಂದ 2ನೇ ಹಂತದ ಕೆಜಿಪಿಎಲ್ ಇದಾಗಿದೆ. ವಿವಿಧ ವಿಭಾಗದಲ್ಲಿ ದಿನಕ್ಕೆ ಏಳು ಪಂದ್ಯಗಳು ನಡೆಯಲಿದ್ದು, ಆಗಸ್ಟ್ 19ರಂದು ಕೊನೆಯ ಪಂದ್ಯಗಳು ನಡೆಯಲಿವೆ. 20 ವಯಸ್ಸಿನಿಂದ 65 ವಯಸ್ಸಿನವರು ಲೀಗ್ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು.