ಕೊಳ್ಳೇಗಾಲ: ಪ್ರವಾಹ ತಡೆಗಟ್ಟಲು ನದಿ ಅಂಚಿನ ತಡೆಗೋಡೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಒತ್ತಾಯಿಸಿದರು.
ತಾಲೂಕಿನ ನದಿ ಪಾತ್ರದ ದಾಸನಪುರ, ಮೂಳ್ಳೂರು ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು. ರೈತರ ಜಮೀನಿಗೆ, ಮನೆಗಳಿಗೆ ನೀರು ನುಗ್ಗಬಾರದು. ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಸಂಭವಿಸಬಹುದಾದ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಎಂದು ಯೋಜನೆ ರೂಪಿಸಲಾಗಿತ್ತು.
ನಾನು ಶಾಸಕನಾಗಿದ್ದ ಸಂದರ್ಭ ಮುಳ್ಳೂರು ಗ್ರಾಮದಿಂದ ಹರಳೆ ವರೆಗೆ ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಸುಮಾರು 8 ಕಿ.ಮೀ. ತಡೆಗೋಡೆ ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ಆ ಸಾಲಿನಲ್ಲಿ ಅನುದಾನ ಕೊರತೆಯಿಂದ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆ ಗೊಂಡಿತ್ತು.
ಈ ಹಣದಲ್ಲಿ ಮುಳ್ಳೂರು ಗ್ರಾಮದ ನಾಯಕರ ಬಡಾವಣೆ ಸಮೀಪ ತಡೆಗೋಡೆ ನಿರ್ಮಿಸ ಲಾಗಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಅಧಿಕಾರಿಗಳ ಮಾಹಿತಿಯಂತೆ ತಡೆಗೋಡೆ ನಿರ್ಮಾಣಕ್ಕೆ 150 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಅಧೀನ ಕಾರ್ಯದರ್ಶಿಗಳೊಂದಿಗೆ ಈ ನಿಟ್ಟಿನಲ್ಲಿ ಚರ್ಚಿಸಬೇಕು. ತಡೆಗೋಡೆ ತುರ್ತು ಅಗತ್ಯ ಮನದಟ್ಟು ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಗೊಳಿಸಿ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಎಂದು ಎನ್.ಮಹೇಶ್ ಸಲಹೆ ನೀಡಿದರು.
ಕಬಿನಿ ಹಾಗೂ ಕೆಆರ್‌ಎಸ್ ನಿಂದ ಮಂಗಳವಾರ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮುಳ್ಳೂರಿನ ಜಮೀನುಗಳು ಜಾಲವೃತವಾಗಿದೆ. ನೀರು ಹೆಚ್ಚಾದರೆ ಜನ ವಸತಿ ಕೇಂದ್ರಗಳಿಗೂ ಪ್ರವಾಹ ನುಗ್ಗಲಿದೆ. 6 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಮುಳ್ಳೂರಿನ ಶಾಲೆಯಲ್ಲೇ ಕಾಳಜಿ ಕೇಂದ್ರ ತೆರೆದರೆ ಜನರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿ, ಜನ-ಜಾನುವಾರುಗಳ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಎನ್.ಮಹೇಶ್ ಹೇಳಿದರು. ಗ್ರಾಮದ ಮುಖಂಡರಾದ ಸೋಮಣ್ಣ ಉಪ್ಪಾರ್, ವಿಜಯರಾಜ್, ಜಗದೀಶ್ ಶಂಕನಪುರ, ಶೇಖರಪ್ಪ ಮತ್ತಿತರಿದ್ದರು.