ಕೊಳ್ಳೇಗಾಲ : ಪ್ರಸಿದ್ದ ಧಾರ್ಮಿಕ ಕ್ಷೇತ್ರ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ರಸ್ತೆ ರಿಪೇರಿಗೆ ಮುಂದಾಗಿದೆ.
ಜ.13 ರಿಂದ 17 ರವರೆಗೆ ಜಾತ್ರೆ ನಡೆಯಲಿದ್ದು. ಜಾತ್ರೆಗೆ 2 ದಿನ ಮಾತ್ರ ಬಾಕಿ ಉಳಿದಿದೆ. ಐದು ದಿನಗಳು ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಕಡೆಯಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಲಾರಿ, ಬಸ್, ಕಾರು, ಬೈಕ್ , ಆಟೋರಿಕ್ಷಾ ಸೇರಿದಂತೆ ಸಾವಿರಾರು ವಾಹನಗಳು ಕ್ಷೇತ್ರಕ್ಕೆ ಬರಲಿವೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹದ ಗೆಟ್ಟಿರುವ ಚಿಕ್ಕಲ್ಲೂರು ರಸ್ತೆಗೆ ಜಲ್ಲಿಕಲ್ಲು ಹಾಕಿ ತೇಪೆ ಕಾಮಗಾರಿ ಕೈಗೊಳ್ಳಲಾಗಿದೆ.
ಮತ್ತೀಪುರ ವೃತ್ತ ಸಮೀಪದ ಮೊಳಗನಕಟ್ಟೆಯಿಂದ ಕೊತ್ತನೂರು ಗೇಟ್ ವರೆಗಿನ ಸುಮಾರು 8 ಕಿ.ಮೀ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ದುರಸ್ತಿ ನಿರೀಕ್ಷೆಯಲ್ಲಿ ಚಿಕ್ಕಲ್ಲೂರು ರಸ್ತೆ ಎಂಬ ಶೀರ್ಷಿಕೆಯಡಿ ಡಿ.30 ರಂದು ವಿಜಯವಾಣಿ ವರದಿಯನ್ನೂ ಪ್ರಕಟಿಸಿ ಗಮನ ಸೆಳೆದಿತ್ತು. ಜಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿದ್ದರು. ಜಾತ್ರೆ ಬಳಿಕ ನೂತನ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಶಾಸಕ ಮಂಜುನಾಥ ಭರವಸೆ ನೀಡಿದ್ದರು. ಆದರೆ, ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕೆ ಸದ್ಯ ಗುಂಡಿಗಳನ್ನು ಮುಚ್ಚಿಸುವ ಕಾಮಗಾರಿ ನಡೆಯುತ್ತಿದೆ.
ಕಾಟಾಚಾರಕ್ಕೆ ಕೆಲಸ ಮಾಡಬೇಡಿ: ಜಾತ್ರೆ ವೇಳೆಗೆ ರಸ್ತೆ ತೇಪೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಕಳೆದ ವರ್ಷವೂ ಮಾಡಿದ್ದ ತೇಪೆ ಕಾಮಗಾರಿ ಕಾಟಾಚಾರಕ್ಕೆ ಎಂಬಂತೆ ನಡೆದಿತ್ತು. ಅದು ಜಾತ್ರೆ ಮುಗಿಯುವ ಮುನ್ನವೇ ಕಿತ್ತು ಬಂದಿತ್ತು. ಈ ಬಾರಿ ತೇಪೆ ಕಾಮಗಾರಿಯನ್ನು ಉತ್ತಮವಾಗಿ ಮಾಡಲು ಸ್ಥಳೀಯರು ಒತ್ತಾಯಿಸಿದ್ದಾರೆ.