ಚಿಕ್ಕಮಗಳೂರು: ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಗ್ರೋರ‍್ಸ್ ಫೆಡರೇಷನ್ ಸ್ವಾಗತಿಸಿದೆ. ಕೆಜಿಎಫ್ ಬೆಳೆಗಾರರು ಗಡುವು ನೀಡಿರುವ ದಿನದೊಳಗೆ ಅರ್ಜಿಸಲ್ಲಿಸಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್‌ಕುಮಾರ್ ಮನವಿ ಮಾಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ೨೦೧೭-೧೮ರಲ್ಲೇ ಕಾಫಿ ಬೆಳೆಗಾರರ ಅನಧಿಕೃತ ಸಾಗುವಳಿಯನ್ನು ಗುತ್ತಿಗೆ ನೀಡಲು ನಿರ್ಧರಿಸಿತ್ತು. ನಂತರ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ೨೫ ಎಕರೆವರೆಗಿನ ಅನಧಿಕೃತ ಸಾಗುವಳಿ ಜಮೀನನ್ನು ಗುತಿಗೆ ನೀಡಲು ಅನುಮೋದಿಸಿತ್ತು ಎಂದರು.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅರ್ಜಿಯನ್ನು ಕರೆದಿದೆ. ಅರ್ಹ ಬೆಳೆಗಾರರು ನಮೂನೆ ೯ರಲ್ಲಿ ತಹಸೀಲ್ದಾರ್ ಅಥವಾ ನಾಡಕಚೇರಿಯಲ್ಲಿ ಆ.೭ ರಿಂದ ೯೦ ದಿನದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಕಾಶವನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಜಿಎಫ್ ಮನವಿ ಮಾಡುತ್ತದೆ ಎಂದು ತಿಳಿಸಿದರು.
೧೯೬೦ ರಿಂದ ೨೦೦೫ ರವರೆಗೆ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಿ ಅರ್ಜಿ ಪಡೆಯಲು ಮುಂದಾಗಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಸ್ವಾಗತಿಸುತ್ತದೆ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಎಲ್ಲ ರಾಜ್ಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಒತ್ತುವರಿ ಜಮೀನು ಗುತ್ತಿಗೆ ನೀಡಬೇಕು ಅಥವಾ ಸಕ್ರಮ ಮಾಡಿಕೊಡಬೇಕು ಎಂದು ಆಗ್ರಹಿಸಿ ನಡೆದ ನಮ್ಮ ಸುದೀರ್ಘ ಕಾಲದ ಹೋರಾಟಕ್ಕೆ ಸಹಕರಿಸಿದ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಹಾಲಿ ಹಾಗೂ ಮಾಜಿ ಸಂಸದರು, ವಿಧಾನ ಪರಿಷತ್ ಹಾಲಿ ಹಾಗೂ ಮಾಜಿ ಸದಸ್ಯರಿಗೆ ಅಭಿನಂದಿಸುತ್ತೇವೆ ಎಂದರು.
ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ೨೯,೩೪೮ ಎಕರೆ, ಉಡುಪಿ ೩೯೮.೬೬ ಎಕರೆ, ಚಿಕ್ಕಮಗಳೂರು ೨೦,೮೪೪.೧೦ ಎಕರೆ, ಕೊಡಗು ೨೬,೨೫೦ ಎಕರೆ ಸೇರಿ ಒಟ್ಟು ೭೬,೮೪೪.೩೩ ಎಕರೆ ಒತ್ತುವರಿ ಭೂಮಿಯನ್ನು ಸರ್ಕಾರ ಗುತ್ತಿಗೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಕೆಜಿಎಫ್ ಮುಖಂಡ ಎ.ಕೆ ವಸಂತೇಗೌಡ ಮಾತನಾಡಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಕಾಫಿ, ಮೆಣಸು ಮತ್ತಿತರೆ ಬೆಳೆಗಳು ಸಾಕಷ್ಟು ನಾಶವಾಗಿದ್ದು, ಕಾಫಿ ಮಂಡಳಿ ಮತ್ತು ಸಂಬAಧಿಸಿದ ಇಲಾಖೆ ಶೀಘ್ರ ಸಮೀಕ್ಷೆ ಮಾಡಿ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜಿಎಫ್ ಪದಾಧಿಕಾರಿಗಳಾದ ಎಂ.ಎಸ್ ಲಿಂಗಪ್ಪಗೌಡ, ಮಹೇಶ್‌ಗೌಡ, ಶಂಕರ್, ರತ್ನಾಕರ, ಸುರೇಶ್, ದೇವರಾಜ್, ತೌಸಿಫ್ ಮತ್ತಿತರರಿದ್ದರು.