ವೈ.ಶಿವಶಂಕರ್ ಕೆಜಿಎಫ್: ಕಸದಿಂದ ರಸ ತಯಾರಿಸುವ ಕೆಲಸಕ್ಕೆ ನಗರಸಭೆ ಮುಂದಾಗಿದ್ದು, ತಾಲೂಕಿನ ಪಾರಂಡಹಳ್ಳಿ ಹೊರ ವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ನೂರಾರು ಟನ್ ಕಸದಿಂದ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುವ ಯೋಜನೆಗೆ ಮುಂದಾಗಿದೆ.
ಸುಮಾರು 11 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ಘಟಕ ಪ್ರಾರಂಭಿಸಲಾಗಿದ್ದು, ನಗರದ 35 ವಾರ್ಡ್ಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಸುಮಾರು 40 ಟನ್ಗಳಷ್ಟು ಹಸಿ ಹಾಗೂ ಒಣ ಕಸದಿಂದ ರಾಸಾಯನಿಕಮುಕ್ತ ರಸಗೊಬ್ಬರವನ್ನಾಗಿಸುವ ಪ್ರಕ್ರಿಯೆ ಕೈಗೊಳ್ಳಲು 8 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಒಣ ಹಾಗೂ ಹಸಿ ಕಸದಿಂದ ಸಾವಯವ ಗೊಬ್ಬರವನ್ನು ತಯಾರು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಈಗಾಗಲೇ ಈ ಕಾರ್ಯಕ್ಕೆ 19 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಕಳೆದ 30 ವರ್ಷಗಳಿಂದ ಸರ್ಮಪಕವಾಗಿ ಕಸವನ್ನು ವಿಂಗಡಣೆ ಮಾಡದೇ ಇದ್ದುದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆದು ನಿಂತಿದ್ದು, ಕಸ ದುರ್ವಾಸನೆ ಬೀರುತ್ತಿತ್ತು. ಈ ಬಗ್ಗೆ ಸುತ್ತಮುತ್ತಲ ನಾಗರಿಕರು ಹಲವು ಬಾರಿ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ.್ಲ ಆದರೆ ಇದೀಗ ಪ್ರಭಾರಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಮಂಜುನಾಥ್ ಕಸದಿಂದ ಸಾವಯವ ಗೊಬ್ಬರವನ್ನು ತಯಾರು ಮಾಡಿ, ಈ ಭಾಗದ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಬೇಕು ಮತ್ತು ಪೇಪರ್ ಹಾಗೂ ಇತರೆ ಕೆಲವು ವಸ್ತುಗಳನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸರಬರಾಜು ಮಾಡುವ ನೀಲಿ ನಕ್ಷೆ ತಯಾರು ಮಾಡಿಕೊಂಡಿದ್ದಾರೆ.
ನಗರಸಭೆಯ ತ್ಯಾಜ್ಯ ಘಟಕದಲ್ಲಿ ಬಿದ್ದಿರುವ ನೂರಾರು ಟನ್ಗಳಷ್ಟು ಕಸವನ್ನು ರಸವನ್ನಾಗಿ ಪರಿವರ್ತಿಸಿ ನಮ್ಮ ಭಾಗದ ರೈತರಿಗೆ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರವನ್ನು ಸರಬರಾಜು ಮಾಡಲು ಯೋಜನೆ ತಯಾರು ಮಾಡಲಾಗಿದ್ದು, ನುರಿತ ಕಾರ್ಮಿಕರನ್ನು ಬಳಸಿಕೊಂಡು ತರಕಾರಿ ಹಾಗೂ ಇತರೆ ತ್ಯಾಜ್ಯಗಳಿಂದ ಆಧುನಿಕ ಪದ್ಧತಿಯಡಿ ಕಾಂಪೋಸ್ಟ್ ಗೊಬ್ಬರವನ್ನು ತಯಾರು ಮಾಡಲಾಗುತ್ತಿದೆ.
- ಮಂಜುನಾಥ್
ಪ್ರಭಾರಿ ಪೌರಾಯುಕ್ತ, ನಗರಸಭೆ ಕೆಜಿಎಫ್
ಈಗಾಗಲೇ ಹಲವು ರೈತರು ನಮ್ಮಲ್ಲಿ ಗೊಬ್ಬರವನ್ನು ಖರೀದಿ ಮಾಡಲು ಮುಂದೆ ಬಂದಿದ್ದಾರೆ. ತಾಲೂಕಿನ ರೈತರು ಸಾವಯುವ ಗೊಬ್ಬರದಿಂದ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಪ್ರತಿ ಕೆಜಿ ಗೊಬ್ಬರಕ್ಕೆ ಕೇವಲ 5 ರೂ. ದರ ನಿಗದಿಪಡಿಸಲಾಗಿದ್ದು, ಹೆಚ್ಚು ಪ್ರಮಾಣದಲ್ಲಿ ಗೊಬ್ಬರವನ್ನು ಖರೀದಿ ಮಾಡಿದರೆ ಒಂದು ಕೆಜಿ ಗೊಬ್ಬರವನ್ನು 3.50 ರೂ.ಗೆ ನೀಡಲಾಗುವುದು. ತಾಲೂಕಿನ ಎಲ್ಲ ರೈತರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಸಾವಯುವ ಗೊಬ್ಬರನ್ನು ಖರೀದಿ ಮಾಡಬಹುದಾಗಿದೆ.
- ಇಂದಿರಾಗಾಂಧಿ
ನಗರಸಭೆ ಅಧ್ಯಕ್ಷೆ, ಕೆಜಿಎಫ್