ಉಡುಪಿ: ದೇಶದಾದ್ಯಂತ ಸಿನಿ ರಸಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್ -2 ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ ಮಲ್ಪೆ ಪಡುಕೆರೆ ಬೀಚ್‌ನಲ್ಲಿ ಗುರುವಾರ ಚಾಲನೆ ಪಡೆದುಕೊಂಡಿದೆ.
ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಹಲವು ತಿಂಗಳ ಬಳಿಕ ಬಣ್ಣ ಹಚ್ಚಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾಯಕಿ ಶ್ರೀನಿಧಿ ಶೆಟ್ಟಿ ಸಹಿತ ಇಡೀ ಚಿತ್ರತಂಡ ಮಲ್ಪೆಯಲ್ಲಿ ಬೀಡುಬಿಟ್ಟಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಫಾರಿ, ರೇಂಜ್ ರೋವರ್, ಲ್ಯಾಂಡ್ ರೋವರ್‌ನಂತಹ ದುಬಾರಿ ಕಾರುಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಮಲ್ಪೆ ಬಂದರು, ಕಡಲತೀರ ಸಹಿತ ಈ ಭಾಗದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್- 1 ಎಲ್ಲ ಭಾಷೆಗಳಲ್ಲೂ ಅದ್ದೂರಿ ಪ್ರದರ್ಶನ ಕಂಡಿತ್ತು. ಇದೀಗ ಚಾಪ್ಟರ್- 2 ಸಿದ್ಧವಾಗುತ್ತಿದ್ದು, ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ. ಚಾಪ್ಟರ್- 2ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಪ್ರಮುಖ ನಟರು ನಟಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಸಂಜಯ್‌ದತ್ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುವ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ.
ಅಲೆಗಳನ್ನು ತಡೆಯಲಾಗದು: ಸಾಗರದ ಅಲೆಗಳನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಅವುಗಳೊಂದಿಗೆ ಸಾಗುವುದನ್ನು ನೀವು ಕಲಿಯಬಹುದು. ಸುದೀರ್ಘ ವಿರಾಮದ ನಂತರ ರಾಕಿ ಇಂದು ಪ್ರಯಾಣಕ್ಕೆ ಸಿದ್ಧನಾಗಿದ್ದಾನೆ. ಹೀಗೆಂದು ನಾಯಕ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಕಡಲತೀರದಲ್ಲಿ ಅಲೆಗಳ ಎದುರು ನಿಂತಿರುವ ಚಿತ್ರವನ್ನೂ ಶೇರ್ ಮಾಡಿದ್ದಾರೆ.
ಫೋಟೊ-ವಿಡಿಯೋ ನಿಷೇಧ: ನಟ ಯಶ್ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಬೀಚ್ ಬಳಿ ಸೇರಿದ್ದರು. ಸಾರ್ವಜನಿಕರಿಗೆ, ಮಾಧ್ಯಮಗಳಿಗೆ ಚಿತ್ರೀಕರಣ ಸ್ಥಳದ ಫೋಟೋ, ವಿಡಿಯೋ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಫೋಟೋ-ವಿಡಿಯೋ ಮಾಡಿದವರ ಮೊಬೈಲ್‌ಗಳನ್ನು ಕಸಿದುಕೊಂಡ ಬೌನ್ಸರ್‌ಗಳು, ಚಿತ್ರತಂಡ ಡಿಲೀಟ್ ಮಾಡಿಸಿದ್ದಾರೆ. ಈ ಕುರಿತು ಸ್ಥಳದಲ್ಲಿ ಮಾತಿನ ಚಕಮಕಿಯೂ ನಡೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊಡಕ್ಷನ್ ಮ್ಯಾನೇಜರ್ ಗಗನ್ ಮೂರ್ತಿ, ಇದು ಪಾನ್ ಇಂಡಿಯ ಚಿತ್ರವಾಗಿದ್ದು, ದೇಶಾದ್ಯಂತ ಪ್ರೇಕ್ಷಕರು ಕಾತರದಿಂದಿದ್ದಾರೆ. ಚಿತ್ರೀಕರಣದ ಯಾವುದೇ ದೃಶ್ಯವನ್ನು ರಿವೀಲ್ ಮಾಡದಂತೆ ಎಚ್ಚರ ವಹಿಸುತ್ತಿದ್ದೇವೆ. ಹಾಗಾಗಿ ಯಾರೂ ಫೋಟೊ, ವೀಡಿಯೋ ತೆಗೆಯಬಾರದು ಎಂದು ಮನವಿ ಮಾಡಿದರು.