ಕೆಜಿಎಫ್: ಆಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗಿದ್ದ 12 ಕಟ್ಟಡಗಳ ತೆರವುಗೊಳಿಸುವ ಕಾರ್ಯವನ್ನು ಸಂಸದ ಎಸ್.ಮುನಿಸ್ವಾಮಿ ಮತ್ತು ಮಾಜಿ ಶಾಸಕ ವೈ. ಸಂಪಂಗಿ ಶನಿವಾರ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬೆಳಗ್ಗೆ 6 ಗಂಟೆಗೆ ಕಟ್ಟಡ ತೆರವುಗೊಳಿಸುವ ಕೆಲಸ ಪ್ರಾರಂಭಿಸಿದ್ದರು.
ಸಂಸದರು ಅಶೋಕನಗರ ರಸ್ತೆಯಲ್ಲಿರುವ ಕಟ್ಟಡ ಮಾಲೀಕರನ್ನು ಭೇಟಿ ಮಾಡಿ ನಗರ ಅಭಿವೃದ್ಧಿಯಾಗಬೇಕೆಂದರೆ ರಸ್ತೆಗಳು ತುಂಬಾ ಮುಖ್ಯವಾಗುತ್ತವೆ. ಅವು ವಿಸ್ತರಣೆಯಾದಷ್ಟು ನಿಮ್ಮ ವ್ಯಾಪಾರವೂ ಹೆಚ್ಚಾಗುತ್ತದೆ. ನಿಮ್ಮ ಕಟ್ಟಡಗಳ ಬೆಲೆ ಸಹ ಮಾರುಕಟ್ಟೆಯಲ್ಲಿ ಹೆಚ್ಚಳವಾಗುತ್ತದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಶೋಕನಗರ ರಸ್ತೆ ಅಂತರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇದನ್ನು ವಿಸ್ತರಿಸುವಂತೆ 40-50 ವರ್ಷಗಳಿಂದ ನಾಗರಿಕರು ಒತ್ತಾಯಿಸುತ್ತಿದ್ದರು. ಅದರಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 230 ಮೀಟರ್ ರಸ್ತೆಯ ಎರಡು ಭಾಗದಲ್ಲಿ 9 ಮೀಟರ್‌ಗಳಷ್ಟು ವಿಸ್ತರಿಸಲು ಗುರುತು ಹಾಕಲಾಗಿತ್ತು. ಅದರಂತೆ ಕಟ್ಟಡಗಳನ್ನು ಕೆಡವಲಾಗುತ್ತಿದೆ ಎಂದರು.
ಡಬಲ್ ಗೇಮ್ ಆರೋಪ: ಹಿಂದಿದ್ದ ಜನಪ್ರತಿನಿಧಿ ಕಾಮಗಾರಿಗೆ ಅಡ್ಡಿಪಡಿಸಿದ್ದರು. ಕಾಮಗಾರಿ ಆರಂಭವಾಗುವ ಹಂತದಲ್ಲಿ ಕಟ್ಟಡಗಳ ಮಾಲೀಕರಿಗೆ ಕೋರ್ಟ್‌ಗೆ ಹೋಗುವಂತೆ ಸಲಹೆ ನೀಡಿ, ಡಬಲ್ ಗೇಮ್ ಆಡಿದ್ದರು. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ನಮ್ಮ ಸರ್ಕಾರವೇ ಆಡಳಿತದಲ್ಲಿದ್ದು, ಮುತುವರ್ಜಿಯಿಂದ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಯಾರೊಬ್ಬರ ಹೆಸರು ಪ್ರಸ್ತಾಪಿಸದೆ ವಿರೋಧಿಗಳಿಗೆ ಟಾಂಗ್ ನೀಡಿದರು.
ಎಂ.ಜಿ.ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಎಸಿ ಸೋಮಶೇಖರ್, ಪಿ.ಡಿ. ರಂಗಸ್ವಾಮಿ, ನಗರಸಭೆ ಪೌರಾಯುಕ್ತ ಸಿ.ರಾಜು, ಪಿಡ್ಲ್ಲ್ಯುಡಿ ಜೆಇ ರವಿ, ರಾಜಶೇಖರ್, ಮಾಜಿ ಶಾಸಕ ಸಂಪಂಗಿ, ನಗರ ಬಿಜೆಪಿ ಅಧ್ಯಕ್ಷ ಸುರೇಶ್, ಮುಖಂಡರಾದ ಮೇಘನಾಥನ್, ಸುರೇಶ್ ನಾರಾಯಣ ಕುಟ್ಟಿ, ವಿಜಿಕುಮಾರ್ ಮತ್ತಿತರರು ಇದ್ದರು.
ಬಿಜಿಎಂಎಲ್ ಮತ್ತು ಬಿಇಎಂಎಲ್ ಭಾಗದಲ್ಲಿ ಲಭ್ಯವಿರುವ 3,500 ಎಕರೆ ಜಮೀನನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದು ಕೈಗಾರಿಕೆ ಕಾರಿಡಾರ್ ಪ್ರಾರಂಭಿಸಲಾಗುವುದು. ಇದಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕೂಡ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಎಸ್.ಮುನಿಸ್ವಾಮಿ, ಸಂಸದ
ರಸ್ತೆ ಕಾಮಗಾರಿಗಾಗಿ ಶಾಸಕಿ ಪ್ರತಿಭಟನೆ: ಅಶೋಕನಗರ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಶಾಸಕಿ ರೂಪಕಲಾ ಕೋಲಾರ ಡಿಸಿ ಕಚೇರಿ ಎದುರು ಮಳೆಯಲ್ಲೇ ನಿಂತು ಒಂಟಿಯಾಗಿ ಪ್ರತಿಭಟಿಸಿದ್ದರು. ವಿಧಾನಸಭೆ ಕಲಾಪದಲ್ಲೂ ಈ ವಿಷಯ ಪ್ರಸ್ತಾಪಿಸಿ ಸಚಿವರು, ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ವಿಷಯದಲ್ಲಿ ಡಿಸಿಯ ವೈಲ್ಯ ಬಿಡಿಸಿಟ್ಟಿದ್ದರು. ಇದೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರಸ್ತೆ ವಿಸ್ತರಣೆ ಆರಂಭಿಸಿದೆ.