ಕಂಪ್ಲಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಬಳ್ಳಾರಿಯಲ್ಲೇ ಮುಂದುವರಿಯಬೇಕು ಎಂದು ಇಲ್ಲಿನ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, 1976ರಲ್ಲಿ ದಕ್ಷಿಣ ಭಾರತದ ಮೊದಲ ಬ್ಯಾಂಕ್ ಆದ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯೊಂದಿಗೆ ಆರಂಭಗೊಂಡಿದ್ದು ಇತಿಹಾಸ. ರೈತರು, ಮಹಿಳೆಯರು, ಉದ್ಯಮಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಕವಾದ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಸ್ತಾವನೆ ಸಾಧುವಲ್ಲ.
ಬಹುಸಂಖ್ಯಾತರಿಗೆ ವರದಾನದಂತಿರುವ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಬಳ್ಳಾರಿಯಿಂದ ಬೇರೆಡೆ ಸ್ಥಳಾಂತರಿಸಬಾರದು. ಒಂದು ವೇಳೆ ಸ್ಥಳಾಂತರಿಸಲು ಮುಂದಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಜೆ.ಭರಮರೆಡ್ಡಿ, ಕೊಟ್ಟೂರು ರಮೇಶ, ಗಂಗಣ್ಣ, ಟಿ.ವಿರುಪಣ್ಣ, ಮೂಲೆಮನಿ ಮಂಜುನಾಥ, ಮಲ್ಲಿಕಾರ್ಜುನ ಇದ್ದರು.