filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.22685185, 0.64774984);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ನಾಗರಿಕರಿಗೆ ಸೌಲಭ್ಯ ಒದಗಿಸಲು ಪಕ್ಷಾತೀತ ಸೇವೆ

ಹೊನ್ನಾಳಿ: ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕದಿಂದ ನನ್ನ ಕೆಲಸ ಕಡಿಮೆಯಾಗುವಂತಿದೆ. ನಮ್ಮ ಅಧಿಕಾರಾವಧಿ ಮುಗಿಯವವರೆಗೂ ನಾವು ಪ್ರಾಮಾಣಿಕವಾಗಿ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಪಕ್ಷಾತೀತವಾಗಿ ಒದಗಿಸೋಣ ಎಂದು ಪುರಸಭೆ ಅಧ್ಯಕ್ಷ ಮೈಲಪ್ಪ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಜವಾಬ್ದಾರಿ ಹೆಚ್ಚಾದಂತೆಲ್ಲ ಪ್ರಬುದ್ಧರಾಗಿ ನಾಗರಿಕರ ಅವಶ್ಯಕತೆಗಳಿಗೆ ತಕ್ಕಂತೆ ಕೆಲಸ ಮಾಡಿದರೆ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ನಮ್ಮ ಮೇಲೆ ನಂಬಿಕೆ ಇರುವುದಿಲ್ಲ ಎಂದರು.

ಲೆಕ್ಕ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಸುರೇಶ್ ಮಾತನಾಡಿ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಸಾಮಾನ್ಯರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತೇನೆ. ಪಕ್ಷಾತೀತವಾಗಿ ಜನರಿಗೆ ತಲುಪಬೇಕಾದ ಸರ್ಕಾರದ ಸೌಕರ್ಯಗಳನ್ನು ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.

ಪಟ್ಟಣ ಯೋಜನೆ ಪುರೋಭಿವೃದ್ಧಿ ಸಮಿತಿ ಅಧ್ಯಕ್ಷೆ ಅನುಶಂಕರ ಚಂದ್ರು ಮಾತನಾಡಿ, ಯಾವುದೇ ಸಭೆ ಮಾಡುವ ಮುನ್ನ ನಾವು ಮೊದಲು ಒಟ್ಟಾಗಿ ಕುಳಿತು ಚರ್ಚೆ ಮಾಡಬೇಕು. ನಂತರ ಸಭೆ ಕರೆಯಬೇಕು, ಹೀಗೆ ಮಾಡಿದರೆ ಗದ್ದಲಕ್ಕೆ ಅವಕಾಶವಿರುವುದಿಲ್ಲ. ವಿಷಯಗಳನ್ನು ಅರಿತು ಚರ್ಚೆ ಮಾಡಿದರೆ ಸಾರ್ವಜನಿಕರು ನಮ್ಮ ಮೇಲೆ ವಿಶ್ವಾಸವಿಡುತ್ತಾರೆ ಎಂದರು.

ಪುರಸಭೆ ಹಿರಿಯ ಸದಸ್ಯ ಧರ್ಮಪ್ಪ ಮಾತನಾಡಿ, ಎಲ್ಲ ಸ್ಥಳೀಯ ಸಂಸ್ಥೆ ಸದಸ್ಯರ ಅವಧಿಯ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೋ ಅಷ್ಟೂ ದಿನ ನಾಗರಿಕರ ಸೇವೆ ಮಾಡೋಣ. ಎಲ್ಲ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪಕ್ಷಾತೀತವಾಗಿ ಸಲಹೆ ಹಾಗೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 4 ಸ್ಥಾಯಿ ಸಮಿತಿ ರಚನೆ ಮಾಡಬೇಕೆಂಬ ಪೌರಾಡಳಿತ ನಿರ್ದೇಶನಾಲಯದಿಂದ ಲಿಖಿತ ಆದೇಶ ಬಂದ ಹಿನ್ನೆಲೆಯಲ್ಲಿ, ಆ.8 ರಂದು ಪುರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 4 ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸವಿತಾ ಮಹೇಶ್ ಹುಡೇದ್, ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್ ಮಾತನಾಡಿದರು.

ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಬಾವಿಮನೆ ರಾಜಣ್ಣ, ಉಷಾ ಗಿರೀಶ್, ನಾಮನಿರ್ದೇಶಿತ ಸದಸ್ಯರಾದ ರವಿ, ಇಂಜಿನಿಯರ್ ದೇವರಾಜ್, ಮುಖಂಡರಾದ ವಿಜೇಂದ್ರಪ್ಪ, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಚಂದ್ರು ಗುಂಡ, ಸತೀಶ್ ಇತರರು ಇದ್ದರು.