ಜಿಲ್ಲೆ

ಶಾಲೆ ಸಮಸ್ಯೆ ಪರಿಹರಿಸುವಂತೆ ಆಗ್ರಹ

ಜಗಳೂರು: ತಾಲೂಕಿನ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹನುಮಂತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಂತಿರುವ ಮಳೆ ನೀರಿನಿಂದ ಮಕ್ಕಳಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸುವಂತೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರು ಶಾಲಾ ಮುಂಭಾಗದಲ್ಲಿ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ತರಗತಿ ವೇಳೆ ಆಗಮಿಸಿದ ಪಾಲಕರು, ಗ್ರಾಮದ ಮುಖಂಡರು ಶಾಲಾ ಆವರಣದ ಅವ್ಯವಸ್ಥೆ ಕಂಡು ಗ್ರಾಮ ಪಂಚಾಯಿತಿ ವಿರುದ್ಧ ಕಿಡಿಕಾರಿದರು. ನಂತರ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿ ಪಡಿಸದ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

ಶಾಲೆಯಲ್ಲಿ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ವಿಶಾಲವಾದ ಆವರಣವಿದೆ. ಆದರೆ ಗ್ರಾಮದೊಳಗೆ ಚರಂಡಿಗಳಿಲ್ಲದ ಕಾರಣ ಮಳೆ ಮತ್ತು ತ್ಯಾಜ್ಯ, ಕೊಳವೆ ಬಾವಿಯ ನೀರು ತಗ್ಗು ಪ್ರದೇಶದಲ್ಲಿರುವ ಶಾಲೆಗೆ ಹರಿದು ಬರುತ್ತಿದೆ. ಇದರಿಂದ ಆವರಣ ಕೆರೆಯಂತಾಗಿದ್ದು ಓಡಾಡುವುದು ಕಷ್ಟವಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿಲ್ಲವೆಂದು ವಿದ್ಯಾರ್ಥಿಗಳು ದೂರಿದರು.

ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಸಾಕಷ್ಟು ಮಳೆಯಾಗಿರುವುದರಿಂದ ಶಾಲೆಯಲ್ಲಿರುವ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಶಾಲೆಯೊಳಗೆ ಹೋಗಲು ಕಷ್ಟವಾಗುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ತರಗತಿ ಕೇಳಲು ಸಾಧ್ಯವಾಗುತ್ತಿಲ್ಲ. ಕಿರಿಕಿರಿಯುಂಟಾಗುತ್ತಿದೆ ಎಂದರು.

ಎರಡು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ನೀರು ಸಂಗ್ರಹದಿಂದ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಕಾಂಪೌಂಡ್ ಬಿರುಕು ಬಿಟ್ಟಿದೆ. ಯಾವ ಸಮಯದಲ್ಲಾದರೂ ಅಪಾಯ ಸಂಭವಿಸಬಹುದು. ಹಾಗಾಗಿ ಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಗಮನಹರಿಸಿ ವಿದ್ಯಾರ್ಥಿಗಳ ಕಲಿಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದರು.

ಎಸ್​ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗೂ ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಈ ರೀತಿಯಾದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಪಾಲಕರು ಮುಂದೆ ಬರುವುದಿಲ್ಲ. ಶಾಲೆಯನ್ನು ಉಳಿಸಿ, ಬೆಳೆಸಬೇಕಾದವರೆ ಮೌನವಾದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಇಸಿಒ ಬಸವರಾಜಪ್ಪ, ಬಿಆರ್​ಪಿ ಕೊಡದೇಶ ಕುಮಾರ್, ಜಾವಿದ್, ಸಿಆರ್​ಪಿಗಳಾದ ಮಂಜಣ್ಣ, ಲೋಕೇಶ್ ಮತ್ತಿತರರಿದ್ದರು.

ಅಧಿಕಾರಿಗಳಿಗೆ ವರದಿ ಕೊಟ್ಟಿದೆ: ಶಾಲೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಚೆನ್ನಾಗಿದೆ. ಸುತ್ತಮುತ್ತಲಿನ ಗ್ರಾಮದಿಂದ 143 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. 4 ಶಿಕ್ಷಕರಿದ್ದಾರೆ, 5 ಕೊಠಡಿಗಳಿವೆ. ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಶಾಲಾ ಆವರಣದಲ್ಲಿ ನೀರು ನಿಂತಿರುವುದು ದೊಡ್ಡ ತಲೆನೋವಾಗಿದೆ. ಮಕ್ಕಳು ನೀರಲ್ಲಿ ಬಿದ್ದು ಅನಾಹುತವಾದರೆ ಯಾರು ಹೊಣೆ, ಶಾಲೆ ಮುಗಿಯುವವರೆಗೂ ಭಯದಲ್ಲಿ ಇರುತ್ತೇವೆ. ಈ ಸಂಬಂಧ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಮುಖ್ಯಶಿಕ್ಷಕಿ ಸುಜಾತರೆಡ್ಡಿ ಹೇಳಿದರು.

ಶಾಲೆಯ ಪರಿಸ್ಥಿತಿಯ ಬಗ್ಗೆ ಗಮನಕ್ಕೆ ಬಂದಿದೆ. ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳಿಸಲಾಗಿತ್ತು. ಅನುದಾನ ಕೂಡ ಮಂಜೂರಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಿ ಸಮಸ್ಯೆ ಪರಿಹರಿಸಲಾಗುವುದು. ಗ್ರಾಮಸ್ಥರು, ವಿದ್ಯಾರ್ಥಿಗಳು ಸಹಕರಿಸಬೇಕು. | ಹಾಲಮೂರ್ತಿ, ಬಿಇಒ.