ಮೈಸೂರು: ಬುದ್ಧಿಮಾಂದ್ಯ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಕೇವಲಿನ್ ಚಾರಿಟಬಲ್ ಟ್ರಸ್ಟ್ ಕಷ್ಟದ ಕೆಲಸವಾದರೂ ಈ ಕ್ಷೇತ್ರದಲ್ಲಿ ದುಡಿಯಲು ಮುಂದಾಗಿರುವುದು ಸಂತಸದ ವಿಚಾರ. ಇಂತಹ ಉತ್ತಮ ಮನಸ್ಸು ಹೊಂದಿರುವವರು ಸಿಗುವುದು ಕಷ್ಟ ಎಂದು ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀರಾಂಪುರ 2ನೇ ಹಂತದ ಮಹಾವೀರ ಭವನದಲ್ಲಿ ಶುಕ್ರವಾರ ಕೇವಲಿನ್ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ನಮ್ಮ ಹಲವಾರು ಸಮಸ್ಯೆಗಳಿಗೆ ಮನಸ್ಸು ಕಾರಣ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಾಣಬೇಕು. ಇಂತಹ ಸೇವಾ ಕಾರ್ಯ ಮಾಡಲು ಮನಸ್ಸು ಬೇಕು. ಉತ್ತಮ ಮನಸ್ಸು ಇಲ್ಲದೆ ಹೋದರೆ ಸೇವಾ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಅಧ್ಯಕ್ಷೆ ಬಿ.ಸೀಮಂತಿನಿ ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಕೇವಲಿನ್ ಚಾರಿಟಬಲ್ ಟ್ರಸ್ಟ್ ಪ್ರಾರಂಭಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುವುದು ಹಾಗೂ ಅವರ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಈ ಕುರಿತು ಪಾಲಕರಿಗೆ ತರಬೇತಿ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.
ವೇದಿಕೆಯಲ್ಲಿ ಜೀವಧಾರ ರಕ್ತನಿದಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಸ್.ಇ. ಗಿರೀಶ್, ಮಹಾವೀರ ಭವನದ ಅಧ್ಯಕ್ಷ ಬಿ.ಎಸ್. ಸಂತೋಷ್ ಇದ್ದರು.