ಜಿಲ್ಲೆ

ಕೇತೇಶ್ವರ ಜಯಂತಿ ಆಚರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮೇದಾರ ಓಣಿಯಲ್ಲಿ ಕೇತೇಶ್ವರ ಜಯಂತ್ಯುತ್ಸವ ನಿಮಿತ್ತ ಸೋಮವಾರ ಬೃಹತ್ ಮೆರವಣಿಗೆ ನಡೆಸಲಾಯಿತು. ಕೇತೇಶ್ವರರ ಭಾವಚಿತ್ರದೊಂದಿಗೆ ಕುಂಭ ಹೊತ್ತ ಮಹಿಳೆಯರು, ಗೆಜ್ಜೆ ಮಜಲು, ವಿವಿಧ ಜಾನಪದ ನೃತ್ಯಗಳು ಮೆರಗು ನೀಡಿತು.
ನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಶರಣ ಕೇತೇಶ್ವರರು ಚೆನ್ನಬಸವಣ್ಣನ ಪರಮ ಭಕ್ತರಾಗಿದ್ದರು. ಲಿಂಗಧಾರಣೆಯೊಂದಿಗೆ ದೀಕ್ಷೆ ಪಡೆದು ಶಾಂತಿ ಮತ್ತು ಧರ್ಮದ ಪ್ರತಿಪಾದಕರಾಗಿ ಸಮಾಜವನ್ನು ಜಾಗೃತಗೊಳಿಸಿ ಸರಿದಾರಿಯಲ್ಲಿ ಸಾಗುವಂತೆ ಮಾಡಿದ ಮಹಾನ ವ್ಯಕ್ತಿ ಆಗಿದ್ದರು. ಸಮಾಜದ ಎಲ್ಲರೂ ಲಿಂಗಧಾರಣೆ ಜತೆಗೆ ದೀಕ್ಷೆ ಪಡೆದು ಪಾವನರಾಗಬೇಕು ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಅರ್ಕಾಚಾರ ಮಾತನಾಡಿ, ಮೇದಾರ ಸಮಾಜದವರು ಶ್ರಮಜೀವಿಗಳು. ಗುಡಿ ಕೈಗಾರಿಕೆ, ಕೌಶಲ ಅಭಿವೃದ್ಧಿಯಲ್ಲಿ ಪ್ರವೀಣರು. ಇಂದಿನ ದಿನಗಳಲ್ಲಿ ವಂಶ ಪಾರಂಪರಿಕ ಕಸುಬಿನಲ್ಲಿ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷ ಮಾತನಾಡಿದರು. ಶ್ರೀ ಕೇತೇಶ್ವರ ಮೇದಾರ ಅಲೆಮಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ದೊಡ್ಡವಾಡ ಅಧ್ಯಕ್ಷತೆ ವಹಿಸಿದ್ದರು. ಯ.ಕಾ. ಹಳಪೇಟ, ಈರಣ್ಣ ಮಹೇಂದ್ರ, ಕರಿಯಪ್ಪ ಮುರಗೋಡ, ರಮೇಶ ಹೆಬ್ಬಳ್ಳಿ, ಬಸವರಾಜ ಸವಣೂರ, ರವಿ ಅರಳಿಕಟ್ಟಿ, ಮಹಾದೇವ ಮುರಗೋಡ, ಇತರರು ಇದ್ದರು.