ಜಿಲ್ಲೆ

ಆಟೋಟದಲ್ಲಿ ಮಿಂದೆದ್ದ ಚಿಣ್ಣರು: ಉಮ್ಮಡಹಳ್ಳಿಯಲ್ಲಿ ಗಮನಸೆಳೆದ ಕೆಸರುಗದ್ದೆ ಕ್ರೀಡಾಕೂಟ

ಮಂಡ್ಯ: ಕೆಸರಿನಲ್ಲಿ ಎದ್ದು, ಬಿದ್ದು ಓಡಿದ ಮಕ್ಕಳು. ಹಗ್ಗಜಗ್ಗಾಟದಲ್ಲಿ ಬಾಹುಬಲಿಯಂತೆ ಚಿಣ್ಣರ ಶಕ್ತಿ ಪ್ರದರ್ಶನ. ಚಪ್ಪಾಳೆ, ಶಿಳ್ಳೆ, ಕಿರುಚಾಟ, ಎಲ್ಲಿಲ್ಲದ ಖುಷಿ. ಗೆದ್ದವರಿಗೆ ಬಹುಮಾನದ ಗರಿ.

ಇದು ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ, ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಂಡುಬಂದ ದೃಶ್ಯಗಳು.

ನಾಟಿ ಸಮಯವಾಗಿದ್ದ ಕಾರಣ ಜಮೀನು ಕೂಡ ಹದವಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಅಪ್ಪಟ ಗ್ರಾಮೀಣ ಆಟದೊಂದಿಗೆ ಆಯೋಜಿಸಿದ್ದು ವಿಶೇಷ. ಸುಮಾರು 190 ವಿದ್ಯಾರ್ಥಿಗಳು ಆಟೋಟದಲ್ಲಿ ಪಾಲ್ಗೊಂಡು ಸಂತಸಪಟ್ಟರು. ಚಿಣ್ಣರ ಕ್ರೀಡಾಕೂಟದಲ್ಲಿ ದೊಡ್ಡವರು ಭಾಗವಹಿಸಿ ಪ್ರೋತ್ಸಾಹ ನೀಡಿದರು.

ಗೆದ್ದವರ ಕೊರಳಿಗೆ ಪದಕ: ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದ ಮಕ್ಕಳಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟದ ಮಾದರಿಯಲ್ಲಿ ಪದಕ ವಿತರಿಸಲಾಯಿತು. ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಮಾದರಿ, ದ್ವಿತೀಯ ಬೆಳ್ಳಿ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕಂಚಿನ ಮಾದರಿ ಪದಕ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಪ್ರಾಥಮಿಕ ಶಾಲೆಯ ಕೆಸರುಗದ್ದೆ ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ರಾಹುಲ್‌ಗೌಡ(ಪ್ರ), ದಿಗಂತ್(ದ್ವಿ), ರೋಹಿತ್(ತೃ), ಬಾಲಕಿಯರ ವಿಭಾಗದಲ್ಲಿ ಕೀರ್ತನಾ(ಪ್ರ), ಹನ್ಸಿಕಾ(ದ್ವಿ), ಸಂಜನಾ(ತೃ) ಬಹುಮಾನ ಪಡೆದುಕೊಂಡರು. ಇನ್ನು ಪ್ರೌಢಶಾಲೆಯ ಕೆಸರುಗದ್ದೆ ಓಟದ ಬಾಲಕರ ವಿಭಾಗದಲ್ಲಿ ಶ್ರೇಯಸ್(ಪ್ರ), ಹೇಮಂತ್(ದ್ವಿ), ಪ್ರೀತಮ್(ತೃ), ಬಾಲಕಿಯರ ವಿಭಾಗದಲ್ಲಿ ಐಶ್ವರ್ಯಾ(ಪ್ರ), ಸಿ.ಸ್ನೇಹಾ(ದ್ವಿ) ಮತ್ತು ಸುಧಾ(ತೃ), ಹಗ್ಗಜಗ್ಗಾಟದ ಬಾಲಕರ ವಿಭಾಗದಲ್ಲಿ ದರ್ಶನ್, ರಾಹುಲ್, ಅಂದಾನಿ, ಜಗದೀಶ್, ಅಕ್ಷಯ್, ಡಿ.ಮಂಜುನಾಥ, ಪ್ರವೀಣ್(ಪ್ರ) ಹಾಗೂ ಯು.ಕೆ.ದರ್ಶನ್, ಹರ್ಷಿತ್‌ಗೌಡ, ಎಲ್.ಮಂಜು, ರೋಹಿತ್, ಪ್ರೀತಂ, ಹೊಯ್ಸಳ, ಕುಶಾಲ್‌ಗೌಡ(ದ್ವಿ) ಬಹುಮಾನ ಗೆದ್ದರು. ಅಂತೆಯೇ ಬಾಲಕಿಯರ ವಿಭಾಗದಲ್ಲಿ ಆರ್.ರಕ್ಷಿತಾ, ಉಮಾದೇವಿ, ರಕ್ಷಿತಾ, ಸಿ.ಸ್ನೇಹಾ, ಧನುಶ್ರೀ, ಎನ್.ಅಮೂಲ್ಯ, ಕುಸುಮಾ, ಬಾಂಧವ್ಯ(ಪ್ರ) ಹಾಗೂ ಐಶ್ವರ್ಯಾ, ಸಿಂಧು, ಪ್ರೀತಿ, ಪ್ರಾರ್ಥನಾ, ಸೌಮ್ಯ, ಬಿಂದು, ಹರಿಣಿ, ಪ್ರಜವಿತ(ದ್ವಿ) ಸ್ಥಾನ ಪಡೆದುಕೊಂಡರು.

ಇದಕ್ಕೂ ಮುನ್ನ ಕ್ರೀಡಾಕೂಟಕ್ಕೆ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಶ್ರೀನಿವಾಸ್ ಚಾಲನೆ ನೀಡಿ, ಮಕ್ಕಳು ಕಲಿಕೆ ಜತೆಗೆ ಆಟದ ಬಗ್ಗೆಯೂ ಗಮನಹರಿಸಬೇಕು. ಬಾಲ್ಯದಿಂದಲೇ ಆಟೋಟದ ಬಗ್ಗೆ ಆಸಕ್ತಿ ವಹಿಸಿ ಮುನ್ನಡೆಯಿರಿ. ಅಂತೆಯೇ ಕ್ರೀಡಾ ವಿಭಾಗದಲ್ಲಿಯೂ ಸಾಧನೆ ಮಾಡಿ ಉನ್ನತ ಸ್ಥಾನ ಅಲಂಕರಿಸಬಹುದು. ಸರ್ಕಾರದಿಂದಲೂ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ರಮ್ಯಾ, ಮುಖ್ಯಶಿಕ್ಷಕ ನಾಗರಾಜು, ಗ್ರಾಪಂ ಪಿಡಿಒ ಮಂಜುನಾಥ್, ಗ್ರಾಪಂ ಕಾರ್ಯದರ್ಶಿ ಮಧುಸೂದನ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ್.ಶಿವಕುಮಾರ್, ಗ್ರಂಥಪಾಲಕ ಯೋಗೇಶ್ ಇತರರಿದ್ದರು.