ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕಲಾ ಸೌರಭವನ್ನು ಜಗದಗಲ ಪಸರಿಸಿ, ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಸಾಧಕ, ಮೇರು ಕಲಾವಿದ ಕೆರೆಮನೆ ಶಂಭು ಹೆಗಡೆ ಪ್ರಾತ:ಸ್ಮರಣೀಯರು. ತಂದೆಯ ಮಾರ್ಗವನ್ನೇ ಅನುಸರಿಸುತ್ತ ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಪುತ್ರ ಶಿವಾನಂದ ಹೆಗಡೆ ಅವರೂ ಸಹ ಕೆರೆಮನೆ ಮಂಡಳಿಗೆ ವಿಶ್ವ ಮಾನ್ಯತೆ ತಂದಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಶ್ಲಾಘಿಸಿದರು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಗುಣವಂತೆ ಯಕ್ಷಾಂಗಣದಲ್ಲಿ ಮಾ.2ರಂದು ಆಯೋಜಿಸಿದ್ದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯ 90ನೇ ವಾರ್ಷಿಕೋತ್ಸವ ಹಾಗೂ 9 ದಿನ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನಕ್ಕೆ ಸುಧೋರಣೆ ನೀಡುವಲ್ಲಿ ಕೆರೆಮನೆ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. ಕೆರೆಮನೆಯ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಅವರಿಂದ ವಿಸ್ತಾರಗೊಂಡು ಐದನೇ ತಲೆಮಾರಿನಲ್ಲಿ ಮುಂದುವರಿದಿದೆ. ಇದೀಗ ಕೆರೆಮನೆ ಶಿವಾನಂದ ಅವರ ನಿರ್ದೇಶನದಲ್ಲಿ ಸಾಂಪ್ರಾದಾಯಿಕ ಶೈಲಿ ಹಾಗೂ ಪರಂಪರೆಯ ಚೌಕಟ್ಟು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ. ಕೆರೆಮನೆ ಮಂಡಳಿಗೆ ಯುನೆಸ್ಕೋದಿಂದ ಮನ್ನಣೆ ಲಭಿಸಿರುವುದು ಯಕ್ಷಲೋಕಕ್ಕೆ ಸಂದ ಗೌರವವಾಗಿದೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ಸತ್ಯನಾರಾಯಣ ಹಾಸ್ಯಗಾರ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ನಳಿನ್ಕುಮಾರ್ ಕಟೀಲು, ಭಟ್ಕಳ ಮಾಜಿ ಶಾಸಕ ಸುನೀಲ್ ನಾಯ್ಕ, ನರಸಿಂಹ ಹೆಗಡೆ ಉಪಸ್ಥಿತರಿದ್ದರು.
ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಸಾಲೇಬೈಲು ಸಮಗ್ರ ಅವಲೋಕ ನೀಡಿದರು. ಕೆರೆಮನೆ ಶಿವಾನಂದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಕ್ಷಗಾನದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವಾರು ಆಧುನಿಕ ಪ್ರಸಂಗ ಪ್ರದರ್ಶಿಸಿದ್ದಾರೆ. ಈ ಹೊಸ ಪ್ರಯೋಗಗಳ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳೂ ಕೇಳಿ ಬಂದಿವೆ. ಯಕ್ಷಗಾನ ತನ್ನ ಪರಂಪರಂಪರೆಯ ಚೌಕಟ್ಟು ಮೀರಿ ಬೆಳೆಯುತ್ತಿದೆ ಎಂಬ ಆರೋಪವೂ ಇದೆ. ಇಂತಹ ಸಂದರ್ಭದಲ್ಲಿ ಯಕ್ಷಗಾನದ ಇಂದಿನ ಬೆಳವಣಿಗೆಗಳು ಕಲೆಯ ಉಳಿವಿಗೆ ಪೂರಕವಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ಹಿರಿಯ ಕಲಾವಿದರಲ್ಲಿ ಚಿಂತನೆ ನಡೆಯಬೇಕು. ಕಿರಿಯ ಕಲಾವಿದರಿಗೆ ಸೂಕ್ತ ಮಾರ್ಗದರ್ಶನವೂ ಈ ಮೂಲಕ ಸಿಗಬೇಕು. ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಭವಿಷ್ಯದ ಕಲಾವಿದರು, ಪ್ರೇಕ್ಷಕರನ್ನು ಸೃಷ್ಟಿಸಬೇಕು ಎನ್ನುವುದು ಅಕಾಡೆಮಿಯ ಅಧ್ಯಕ್ಷನಾಗಿ ನನ್ನ ಚಿಂತನೆಯಾಗಿದೆ ಎಂದು ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಯಕ್ಷಗಾನ ಕಲಿತ ಮಕ್ಕಳು ಸಮಾಜ ಕಂಟಕರಾಗಿ ಬೆಳೆಯಲಾರರು. ಅದೆಷ್ಟೋ ಕುಟುಂಬಗಳ ಹಿರಿಯರು ವೃದ್ಧಾಶ್ರಮ ಸೇರಿದ್ದಾರೆ. ಈ ಬೆಳವಣಿಗೆ ಸುಸ್ಕೃಸತ ಸಮಾಜಕ್ಕೆ ಭೂಷಣವಲ್ಲ. ಯಕ್ಷಗಾನ ಕಲೆ ಈ ಕಳಂಕಕ್ಕೆ ಅಂತ್ಯ ಹಾಡಬಲ್ಲದು. ಯಕ್ಷಗಾನ ಕಲಿತ ಮಕ್ಕಳು ತಂದೆ-ತಾಯಿ, ಗುರು-ಹಿರಿಯರ ಗೌರವಿಸುವುದನ್ನು ಕಲಿಯುತ್ತಾರೆ. | ಡಾ.ತಲ್ಲೂರು ಶಿವರಾಮ ಶೆಟ್ಟಿ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ