ಉಡುಪಿ: ಸತ್ಯದ ಮುಖ ಅನಾವರಣ ಮಾಡುವ ಕೇರಳ ಸ್ಟೋರಿ ಸಿನೆಮಾ ಬ್ಯಾನ್ ಮಾಡುವುದು ಸರಿಯಲ್ಲ. ಜನರಿಗೆ ಇತಿಹಾಸ ಗೊತ್ತಾಗಬೇಕು. ಸಿನೆಮಾ ಪ್ರಚೋದನಕಾರಿ ಅಥವಾ ವಿವಾದಾತ್ಮಕವಾಗಿದ್ದರೆ ಸೆನ್ಸಾರ್ ಮಂಡಳಿಯವರೇ ಅನುಮತಿ ನೀಡುವುದಿಲ್ಲ ಎಂದು ಚಿತ್ರನಟಿ ತಾರಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸೆನ್ಸಾರ್ ಬೋರ್ಡ್‌ನಲ್ಲಿ ಪ್ರತೀ ರಾಜ್ಯದ ಪ್ರತಿನಿಧಿಗಳು ಇರುತ್ತಾರೆ. ಅಲ್ಲೇ ಕಡಿವಾಣ ಹಾಕುತ್ತಾರೆ. ಸೆನ್ಸಾರ್ ಬೋರ್ಡ್ ಅನುಮತಿ ಪಡೆದ ಮೇಲೆ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಕೇರಳ ಸಿಎಂ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.
ಪ್ರಪಂಚದ ಎಲ್ಲಾ ದೇಶಗಳಲ್ಲಿ ಒಂದೊಂದು ಧರ್ಮ ಪ್ರಮುಖವಾಗಿದೆ. ಆದರೆ ಹಿಂದುಗಳಿಗೆ ಇರುವ ಏಕೈಕ ದೇಶ ಭಾರತ. ಇಲ್ಲಿ ಹಿಂದುಗಳಿಗಾಗಿ ಕೆಲಸ ಮಾಡಬೇಡಿ ಎನ್ನುವುದು ಎಷ್ಟು ಸರಿ? ಮುಸ್ಲೀಮರು, ಕ್ರಿಶ್ಚಿಯನ್ನರು ಎಲ್ಲಾ ಒಳ್ಳೇ ರೀತಿಯಲ್ಲಿ ಬಾಳುತ್ತಿದ್ದಾರೆ. ಕಾಂಗ್ರೆಸ್ ಭಜರಂಗದಳ ನಿಷೇಧ ಮಾಡುವ ಪ್ರಸ್ತಾಪ ಸೂಕ್ತವಲ್ಲ ಎಂದರು.
ಫಿಲ್ಮ್ ಸಿಟಿ ಘೋಷಣೆ ಸ್ವಾಗತಾರ್ಹ
ಚೆನ್ನೈ, ಮುಂಬೈಗೆ ಹೋಲಿಸಿದರೆ ರಾಜ್ಯದಲ್ಲಿ ದೊಡ್ಡಮಟ್ಟದ ಯಾವುದೇ ಸ್ಟುಡಿಯೋ ಇಲ್ಲ. ಸಿನೆಮಾ ರಂಗಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪುನೀತ್‌ರಾಜ್ ಕುಮಾರ್ ಹೆಸರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕರ್ನಾಟಕದಲ್ಲಿ ಇರುವಷ್ಟು ಪರಿಪೂರ್ಣ ಪ್ರವಾಸಿ ಸ್ಥಳಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಹೀಗಾಗಿ ಫಿಲ್ಮ್ ಸಿಟಿ ಘೋಷಣೆ ಸ್ವಾಗತಾರ್ಹವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ರಾ.ಕಾ. ಸದಸ್ಯೆ ಅಶ್ವಿನಿ ಎಂ.ಎಲ್ ಉಪಸ್ಥಿತರಿದ್ದರು.