ಮಂಗಳೂರು: ಕೇರಳ ಸರ್ಕಾರದ ಕೋರಿಕೆ ಮೇರೆಗೆ ರೈಲ್ವೆ ಮಂಡಳಿ ಕೆಲವು ರೈಲುಗಳಿಗೆ ಜೂನ್ 1ರಿಂದ ಕೆಲವು ನಿಲುಗಡೆಗಳನ್ನು ರದ್ದುಪಡಿಸಿದೆ.
ನಂ.06346/06345 ತಿರುವನಂತಪುರಂ ಸೆಂಟ್ರಲ್ ಲೋಕಮಾನ್ಯ ತಿಲಕ್ ತಿರುವನಂತಪುರಂ ದೈನಂದಿನ ವಿಶೇಷ ರೈಲಿಗೆ ವರ್ಕಲ, ಶಿವಗಿರಿ, ಕರುನಾಗಪಳ್ಳಿ, ಕಾಯಂಕುಳಂ, ಹರಿಪಾದ್, ಶೇರ‌್ತಲೈ, ಅಲುವ, ಡಿವೈನ್ ನಗರ್, ಕುಟ್ಟಿಪುರಂ, ತಿರೂರ್, ಪರಪ್ಪನಂಗಡಿ, ವಡಗರ, ತಲಶೇರಿ, ಕಣ್ಣಪುರಂ, ಪಯ್ಯನೂರು ಹಾಗೂ ಕಾಂಞಂಗಾಡ್‌ನಲ್ಲಿ ನಿಲುಗಡೆ ಇಲ್ಲ. ನಂ.02617 ಎರ್ನಾಕುಳಂ ಜಂಕ್ಷನ್-ಹಜರತ್ ನಿಜಾಮುದ್ದೀನ್-ಎರ್ನಾಕುಳಂ ಜಂಕ್ಷನ್ ರೈಲುಗಳಿಗೆ ಅಲುವಾ, ಪಟ್ಟಾಂಬಿ, ಕುಟ್ಟಿಪುರಂ, ಪರಪ್ಪಂಗಡಿ, ಫೇರೊಕ್, ಕೊಯ್ಲಂಡಿ, ವಡಗರ, ತಲಶೇರಿ, ಪಯ್ಯನೂರು, ನೀಲೇಶ್ವರ, ಕಾಂಞಂಗಾಡಿನಲ್ಲಿ ನಿಲುಗಡೆ ಇಲ್ಲ. ಈ ಬದಲಾವಣೆಯು ನಂ.02283/02284 ಎರ್ನಾಕುಳಂ ನಿಜಾಮುದ್ದೀನ್ ಎಸಿ ದುರಂತೊ ವಿಶೇಷ ರೈಲಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ರದ್ದಾದ ರೈಲು ಪ್ರಯಾಣ ಟಿಕೆಟ್ ಹಣ ಮರುಪಾವತಿ: ರೈಲ್ವೆ ಮಂಡಳಿ ಸೂಚನೆ ಮೇರೆಗೆ ದಕ್ಷಿಣ ರೈಲ್ವೆ ಮಾರ್ಚ್ 22ರ ಬಳಿಕ ರದ್ದುಗೊಂಡಿರುವ ರೈಲು ಪ್ರಯಾಣದ ಟಿಕಟ್ ದರದ ಪೂರ್ಣ ಮರುಪಾವತಿ ವ್ಯವಸ್ಥೆ ಮಾಡಲಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಅದರಲ್ಲೇ ಮರುಪಾವತಿ ಮಾಡಲಾಗುವುದು.
ಕೌಂಟರ್ ಮೂಲಕ ಬುಕ್ಕಿಂಗ್ ಮಾಡಿದವರಿಗೆ ಅವರ ನೋಂದಾಯಿತ ಪ್ರಯಾಣ ದಿನಾಂಕದ 180 ದಿನಗಳ ವರೆಗೂ ಈ ಮರುಪಾವತಿ ಪಡೆದುಕೊಳ್ಳಬಹುದಾಗಿದ್ದು ಯಾರೂ ಕೌಂಟರ್‌ಗೆ ತುರ್ತಾಗಿ ಧಾವಿಸಬೇಕಾಗಿಲ್ಲ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ದಿನಕ್ಕನುಗುಣವಾಗಿ ಮರುಪಾವತಿ ದಿನಗಳನ್ನೂ ನಿಗದಿಪಡಿಸಲಾಗಿದೆ. ಮಾ.22ರಿಂದ 31ರವರೆಗಿನ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಮೇ 27ರ ಬಳಿಕ, ಏಪ್ರಿಲ್ 1ರಿಂದ 14ರವರೆಗಿನ ಟಿಕೆಟ್‌ನವರಿಗೆ ಜೂನ್ 3ರಿಂದ, ಏ.15ರಿಂದ 20ರ ವರೆಗಿನ ಟಿಕೆಟ್‌ನವರಿಗೆ ಜೂನ್ 9ರಿಂದ, ಮೇ 1ರಿಂದ 15ರವರೆಗಿನ ಬುಕ್ಕಿಂಗ್‌ನವರಿಗೆ ಜೂನ್ 16ರಿಂದ ಮೇ 16ರಿಂದ 31ರ ವರೆಗಿನ ಬುಕ್ಕಿಂಗ್‌ನವರಿಗೆ ಜೂನ್ 23ರಿಂದ, ಜೂನ್ 1ರಿಂದ 30ರವರೆಗಿನ ಬುಕ್ಕಿಂಗ್‌ನವರಿಗೆ ಜೂನ್ 28ರಿಂದ ಟಿಕೆಟ್ ಪೂರ್ಣ ದರ ಮರುಪಾವತಿ ಪ್ರಾರಂಭಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.