ಜಿಲ್ಲೆ

ಪಟಾಕಿ ಭೀಕರ ಸ್ಫೋಟ, 150ಕ್ಕೂ ಹೆಚ್ಚು ಮಂದಿಗೆ ಗಾಯ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೊಡು

ನೀಲೇಶ್ವರ ತೆರು ಅಞೂಟ್ಟಂಬಲ ವೀರಕ್ಕಾವುಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಕಳಿಯಾಟ ಮಹೋತ್ಸವದ ಸಂದರ್ಭ ಸುಡುಮದ್ದು ಸಂಗ್ರಹಕ್ಕೆ ಬೆಂಕಿ ತಗುಲಿದ ಪರಿಣಾಮ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ 150ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆ, ಮಂಗಳೂರು, ಕಣ್ಣೂರು, ಕೋಯಿಕ್ಕೋಡ್ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೋಮವಾರ ತಡರಾತ್ರಿ ಶ್ರೀ ಮೂವಾಳಂಕುಯಿ ಚಾಮುಂಡಿ ದೈವ ಮಹೋತ್ಸವ ನಡೆಯುತ್ತಿದ್ದ ಸಂದರ್ಭ ಸುಡುಮದ್ದು ಸ್ಫೋಟಿಸುವಾಗ ಬೆಂಕಿ ಕಿಡಿಯೊಂದು ದೈವಸ್ಥಾನ ಸನಿಹದ ತಗಡು ಶೀಟ್‌ನ ಕೊಠಡಿಯಲ್ಲಿ ದಾಸ್ತಾನಿರಿಸಿದ್ದ ಸುಡುಮದ್ದುಗಳ ಮೇಲೆ ಬಿದ್ದು ಭೀಕರ ಸ್ಫೋಟ ಸಂಭವಿಸಿದೆ.

ಬೆಂಕಿಯ ಜ್ವಾಲೆ ಆಕಾಶದೆತ್ತರಕ್ಕೆ ಚಾಚಿದ್ದು, ಇದರಿಂದ ಕಳಿಯಾಟಂ ವೀಕ್ಷಣೆಗೆ ಸನಿಹ ಕುಳಿತಿದ್ದ ಮಹಿಳೆಯರು, ಮಕ್ಕಳ ಸಹಿತ ಹಲವು ಮಂದಿ ಗಾಯಗೊಂಡಿದ್ದಾರೆ. ಬಹುತೇಕಮಂದಿಯ ಮುಖ, ಕೈಕಾಲುಗಳಿಗೆ ಸುಟ್ಟ ಗಾಯಗಳುಂಟಾಗಿದೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸಾರ್ವಜನಿಕರ ಸಹಕಾರದಿಂದ ಬೆಂಕಿ ಶಮನಗೊಳಿಸಲಾಯಿತು.

ಉತ್ತರ ಮಲಬಾರ್ ಪ್ರದೇಶದಲ್ಲಿ ದೈವಂಕೆಟ್ಟು ಮಹೋತ್ಸವಕ್ಕೆ ಚಾಲನೆ ನೀಡುವ ಕ್ಷೇತ್ರಗಳಲ್ಲಿ ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಒಂದಾಗಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ, ಕಾಞಂಗಾಡು ಡಿವೈಎಸ್‌ಪಿ ಬಾಬು ಪೆರಿಞೋತ್, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ ಶಾಂತಾ, ಉಪಾಧ್ಯಕ್ಷ ಟಿ.ವಿ ಮಹಮ್ಮದ್ ರಾಫಿ, ನಗರಸಭಾ ಸದಸ್ಯರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ದೈವಸ್ಥಾನ ಆಡಳಿತ ಸಮಿತಿಯ ನಿರ್ಲಕ್ಷ್ಯ ಧೋರಣೆ ದುರಂತಕ್ಕೆ ಕಾರಣವಾಗಿರುವುದಾಗಿ ಆರೋಪ ಕೇಳಿಬರುತ್ತಿದೆ. ಕಡಿಮೆ ಸ್ಪೋಟಕ ಹೊಂದಿರುವ ಪಟಾಕಿ ದಾಸ್ತಾನಿದ್ದ ಕಾರಣ ಹೆಚ್ಚಿನ ದುರಂತ ತಪ್ಪಿದೆ.